ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಳ್ಳಿಯೊಂದರಲ್ಲಿ ನೊಣಗಳ ಹಾವಳಿಯನ್ನು ಸಹಿಸಲಾಗದ ಜನ ನೀರಿನ ಟ್ಯಾಂಕ್ ಏರಿರುವ ಘಟನೆ ಉತ್ತರ ಪ್ರದೇಶ ರಾಜ್ಯದಲ್ಲಿ ನಡೆದಿದೆ. ನೊಣಗಳ ಕಾಟದಿಂದ ಗ್ರಾಮದಲ್ಲಿ ಯುವಕರಿಗೆ ಮದುವೆ ಇಲ್ಲ. ಹೊಸದಾಗಿ ಮದವೆಯಾದವರು ಗಂಡನ ಮನೆ ತೊರೆದು ತವರಿಗೆ ಮರಳುತ್ತಿದ್ದಾರೆ. ನೊಣಗಳ ಅವ್ಯವಸ್ಥೆಯಿಂದಾಗಿ ಆ ಗ್ರಾಮಕ್ಕೆ ಸಂಬಂಧಿಕರ ಭೇಟಿ ಕೂಡ ಕಡಿಮೆಯಾಗಿದೆ.
ಈ ವಿಚಿತ್ರ ಘಟನೆ ನಡೆದಿರುವುದು ಯುಪಿಯ ಹರ್ದೋಯ್ ಜಿಲ್ಲೆಯ ಕುಯಿಯಾ ಗ್ರಾಮದಲ್ಲಿ. ಈ ಗ್ರಾಮದಲ್ಲಿ ನೊಣಗಳು ಸೃಷ್ಟಿಸುವ ತೊಂದರೆ ಅಷ್ಟಿಷ್ಟಲ್ಲ. ನೊಣಗಳ ಕಾಟ ತಾಳಲಾರದೆ ಗ್ರಾಮದ ಕೆಲವರು ನೀರಿನ ಟ್ಯಾಂಕರ್ ಹತ್ತಿ ಪ್ರತಿಭಟನೆ ನಡೆಸಿದರು. ಈ ಗ್ರಾಮದಲ್ಲಿ ನೊಣಗಳ ಹಾವಳಿ ಹೆಚ್ಚಾಗಿರುವುದಕ್ಕೆ ಕೋಳಿ ಫಾರಂ ಇರುವುದು ಮುಖ್ಯ ಕಾರಣ. ಇದರಿಂದ ಗ್ರಾಮದಲ್ಲಿ ನೊಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ನೊಣಗಳ ಹಾವಳಿಯಿಂದ ಗ್ರಾಮಸ್ಥರು ಊಟ ಮಾಡಲು, ನೀರು ಕುಡಿಯಲು, ಸ್ನಾನಕ್ಕೂ ತೊಂದರೆ ಅನುಭವಿಸುತ್ತಿದ್ದು, ಸೊಳ್ಳೆ ಪರದೆಯಲ್ಲೇ ಆಶ್ರಯ ಪಡೆಯುವಂತಾಗಿದೆ.
ಗ್ರಾಮದಲ್ಲಿ ನೊಣಗಳ ತೀವ್ರ ಸಮಸ್ಯೆಯಿಂದ ಕೆಲ ಮಹಿಳೆಯರು ಮನೆ ಬಿಟ್ಟು ಹೋಗುತ್ತಿದ್ದು, ಗ್ರಾಮದ ಯುವಕರಿಗೆ ಹುಡುಗಿ ಕೊಡಲು ಯಾರೂ ಮುಂದೆ ಬರುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಈ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಗ್ರಾಮದಲ್ಲಿ ನೊಣಗಳ ಕಾಟ ನೀಗಿಸುವಂತೆ ಆಗ್ರಹಿಸಿ ನೀರಿನ ಟ್ಯಾಂಕ್ ಹತ್ತಿ ಪ್ರತಿಭಟನೆ ನಡೆಸಿದರು. ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಗಂಟೆಗಟ್ಟಲೆ ಮಾತುಕತೆ ನಡೆಸಿ ನೊಣಗಳ ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಜನ ಕೆಳಗಿಳಿದರು.