ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಗೂಢಚಾರನಾಗಿ ಕೆಲಸ ಮಾಡುತ್ತಿದ್ದ ಯುವಕನನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ಯುಪಿಯ ಗೊಂಡಾ ಜಿಲ್ಲೆಯ ತರಬ್‌ಗಂಜ್ ಪ್ರದೇಶದ ಮೊಹಮ್ಮದ್ ರಯೀಸ್ (ಉತ್ತರ ಪ್ರದೇಶದ ಯುವಕ) ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈತನಿಗೆ ಅರ್ಮಾನ್ ಎಂಬ ಯುವಕನ ಪರಿಚಯವಾಗಿದೆ.
ಅರ್ಮಾನ್ ಭಾರತದ ವಿರುದ್ಧ ಗೂಢಚಾರಿಕೆ ಮಾಡುವಂತೆ ರಯೀಸ್ ಮನಪರಿವರ್ತನೆ ಮಾಡಿ, ಐಸಿಸ್ ಪರವಾಗಿ ಕೆಲಸ ಮಾಡಲು ಒಪ್ಪುವಂತೆ ಮಾಡಿದ್ದ. 2022 ರಲ್ಲಿ ರಯೀಸ್ ವಿದೇಶಿ ಸಂಖ್ಯೆಯಿಂದ ಫೋನ್ ಕರೆಯನ್ನು ಸ್ವೀಕರಿಸಿದ್ದಾಗಿ ಯುಪಿ ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ರಯೀಸ್, ಹುಸೇನ್ ಎಂಬ ಪಾಕಿಸ್ತಾನಿ ಗೂಢಚಾರನಿಗೆ ಭಾರತೀಯ ಸೇನಾ ಕಂಟೋನ್ಮೆಂಟ್‌ಗಳ ಬಗ್ಗೆ ರಹಸ್ಯ ಮಾಹಿತಿಯನ್ನು ರವಾನಿಸಿ, ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದಿಂದ 15 ಸಾವಿರ ರೂಪಾಯಿ ಪಡೆದಿದ್ದಾನೆ.
ರಯೀಸ್ ಚಟುವಟಿಕೆಗಳು ಅನುಮಾನಾಸ್ಪದವಾಗಿದ್ದರಿಂದ, ಅವರನ್ನು ವಿಚಾರಣೆಗಾಗಿ ಲಖನೌನಲ್ಲಿರುವ ಎಟಿಎಸ್ ಪ್ರಧಾನ ಕಚೇರಿಗೆ ಕರೆಸಲಾಯಿತು. ಎಟಿಎಸ್ ತನಿಖೆ ವೇಳೆ ರಯೀಸ್ ಬೇಹುಗಾರಿಕೆಯಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಎಟಿಎಸ್ ವಿಶೇಷ ಡಿಜಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ. ರಯೀಸ್ ವಿರುದ್ಧ ಐಪಿಸಿ ಸೆಕ್ಷನ್ 121ಎ ಮತ್ತು 123 ಮತ್ತು ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.