ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರು ವರ್ಷದ ಬಾಲಕ ಹಾವನ್ನು ಕಚ್ಚಿ ಕೊಂದ ಘಟನೆ ನಗರದಲ್ಲಿ ಭಾರೀ ಸಂಚಲನ ಮೂಡಿಸಿದೆ. ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯ ಮದ್ನಾಪುರ ಗ್ರಾಮದಲ್ಲಿ ಮನೆಯ ಹೊರಗೆ ಆಟವಾಡುತ್ತಿದ್ದಾಗ ಬಂದ ಹಾವನ್ನು ಬಾಲಕ ಕಚ್ಚಿ ಕಚ್ಚಿ ಸಾಯಿಸಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ಮಗು ಪ್ರಜ್ಞೆ ತಪ್ಪಿ ಬಿದ್ದಿತ್ತು.
ದಿನೇಶ್ ಸಿಂಗ್ ತನ್ನ ಮೂರು ವರ್ಷದ ಮಗ ಮತ್ತು ತಾಯಿಯೊಂದಿಗೆ ಮದ್ನಾಪುರ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಳೆದ ಶನಿವಾರ ಮಗು ಮನೆಯ ಹೊರಗೆ ಆಟವಾಡುತ್ತಿದ್ದಾಗ ಹಾವೊಂದು ಅಲ್ಲಿಗೆ ಬಂದಿತ್ತು. ಹಾವುಗಳು ಕಚ್ಚುತ್ತವೆ ಎಂದು ತಿಳಿಯದ ಪುಟ್ಟ ಬಾಲಕ ತೆವಳುತ್ತಿದ್ದ ಹಾವನ್ನು ಹಿಡಿದು ಬಾಯಿಗೆ ಹಾಕಿ ಕಚ್ಚಿದ್ದಾನೆ.
ಕೆಲಸದಲ್ಲಿದ್ದ ಹುಡುಗನ ಅಜ್ಜಿ ಬಾಲಕ ಏನು ಮಾಡುತ್ತಿದ್ದಾನೆಂದು ನೋಡಲು ಬಂದಾಗ ಅಜ್ಜಿಗೆ ಶಾಕ್ ಕಾದಿತ್ತು. ಮಗುವಿನ ಬಾಯಲ್ಲಿ ರಕ್ತ ಸುರಿಯುತ್ತಿತ್ತು..ಹಾವು ಪಕ್ಕದಲ್ಲಿ ಬಿದ್ದಿರುವುದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ತಕ್ಷಣ ಜೋರಾಗಿ ಕೂಗಿ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ಕರೆದೊಯ್ದು ವೈದ್ಯರಿಗೆ ವಿಷಯ ತಿಳಿಸಿದ್ದಾರೆ. ಚಿಕಿತ್ಸೆ ಆರಂಭಿಸಿದ ವೈದ್ಯರು, 24 ಗಂಟೆಗಳ ಬಳಿಕ ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದರಿಂದ ಕುಟುಂಬಸ್ಥರು ಹಾಗೂ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.