ಹೊಸದಿಗಂತ ವರದಿ ಮಡಿಕೇರಿ:
ವಿಶ್ವ ಹಿಂದೂ ಪರಿಷದ್ ಕೊಡಗು ಜಿಲ್ಲಾಧ್ಯಕ್ಷರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿರುವ ದುಷ್ಕರ್ಮಿಗಳು ಅವರ ಹತ್ಯೆಗೆ ಯತ್ನಿಸಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ವಿಶ್ವ ಹಿಂದೂ ಪರಿಷದ್ ಕೊಡಗು ಜಿಲ್ಲಾಧ್ಯಕ್ಷ, ವಕೀಲ ಕೃಷ್ಣಮೂರ್ತಿ ಅವರು ಬುಧವಾರ ಕುಶಾಲನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಚೆಟ್ಡಳ್ಳಿ ಮಾರ್ಗವಾಗಿ ಮನೆಗೆ ಹಿಂತಿರುಗುವಾಗ ಅಬ್ಯಾಲ ಬಳಿ ಈ ದುರ್ಘಟನೆ ನಡೆದಿದೆ. ದುಷ್ಕರ್ಮಿಗಳು ಹಾರಿಸಿದ ಗುಂಡು ಕೃಷ್ಣಮೂರ್ತಿ ಅವರು ಚಾಲಿಸುತ್ತಿದ್ದ ಕಾರಿಗೆ ತಗುಲಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಬಳಿಕ ಮಡಿಕೇರಿಗೆ ಬಂದ ಕೃಷ್ಣಮೂರ್ತಿ ಅವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸುದ್ದಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃಷ್ಣಮೂರ್ತಿ ಅವರ ಕಾರಿನ ಮೇಲೆ ಗುಂಡು ಹಾರಿಸಿರುವ ಕೃತ್ಯದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಶಾಂತಿ ಕದಡುವ ಪ್ರಯತ್ನ ಇದಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಚುನಾವಣೆ ಸಂದರ್ಭದಲ್ಲಿ ಕೋವಿಗಳನ್ನು ಸಮೀಪದ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡುವಂತೆ ಜಿಲ್ಲಾಡಳಿತ ಈಗಾಗಲೇ ಆದೇಶ ಹೊರಡಿಸಿದ್ದು, ಯಾರೋ ಬಂದೂಕು ಠೇವಣಿ ಇಡದವರು ಇಲ್ಲವೇ ಪರವಾನಗಿ ರಹಿತ ಕೋವಿ ಹೊಂದಿರುವರು ಈ ಕೃತ್ಯ ಎಸಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಜಿಲ್ಲಾ ಪೊಲೀಸರು ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ವಿವಿಧ ಸಂಘಟನೆಗಳ ಪ್ರಮುಖರಿಂದ ಕೇಳಿ ಬಂದಿದೆ.