ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇವಲ 15 ವರ್ಷದ ಹುಡುಗನೊಬ್ಬ ಹಿರಿಯ ಆಟಗಾರರ ತಂಡವೊಂದನ್ನು ಮುನ್ನಡೆಸುತ್ತಾನೆಂದರೆ ನಂಬುವುದು ಕಷ್ಟ. ಆದರೆ, ಭಾರತದ ಯುವ ಕ್ರಿಕೆಟ್ ತಾರೆ ವೈಭವ್ ಸೂರ್ಯವಂಶಿ ಈ ಅಸಾಧ್ಯವನ್ನು ಸಾಧ್ಯವಾಗಿಸಿ ತೋರಿಸಿದ್ದಾರೆ. ಶನಿವಾರ ಇಂದೋರ್ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ 2026-27ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಬಿಹಾರ ತಂಡವನ್ನು ಮುನ್ನಡೆಸುವ ಮೂಲಕ ವೈಭವ್, ಪುರುಷರ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಿರಿಯ ನಾಯಕ ಎಂಬ ಐತಿಹಾಸಿಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಈ ಸಾಧನೆ ಮಾಡಿದಾಗ ವೈಭವ್ ಅವರಿಗೆ ಕೇವಲ 15 ವರ್ಷ 232 ದಿನಗಳು. ಈ ಮೂಲಕ ಕಳೆದ ವರ್ಷ ಆಗಸ್ಟ್ನಲ್ಲಿ 17 ವರ್ಷ 311 ದಿನಗಳ ವಯಸ್ಸಿನಲ್ಲಿ ಸೈಪ್ರಸ್ ವಿರುದ್ಧ ಕ್ರೊಯೇಷಿಯಾ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ್ದ ಜಾಕ್ ವುಕುಸಿಕ್ ಅವರ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ವೈಭವ್ ಅಳಿಸಿಹಾಕಿದ್ದಾರೆ. ಟಾಸ್ ಗೆದ್ದ ವೈಭವ್, ಅನುಭವಿ ಜಯದೇವ್ ಉನಾದ್ಕತ್ ನಾಯಕತ್ವದ ಸೌರಾಷ್ಟ್ರ ವಿರುದ್ಧ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಬಿಹಾರ ಕ್ರಿಕೆಟ್ ಸಂಸ್ಥೆಯು ಟೂರ್ನಿಯ ಮೊದಲ ಎರಡು ಪಂದ್ಯಗಳಿಗೆ ವೈಭವ್ ಅವರನ್ನು ನಾಯಕನನ್ನಾಗಿ ಹಾಗೂ ಸೂರಜ್ ಕಶ್ಯಪ್ ಅವರನ್ನು ಉಪನಾಯಕನನ್ನಾಗಿ ನೇಮಿಸಿದೆ.
ವೈಭವ್ ಅವರಿಗೆ ನಾಯಕತ್ವದ ಜವಾಬ್ದಾರಿ ಹೊಸದೇನಲ್ಲ. ಇದೇ ವರ್ಷ ನಡೆದ ದುಲೀಪ್ ಟ್ರೋಫಿಯಲ್ಲಿ ಇಶಾನ್ ಕಿಶನ್ ನಾಯಕತ್ವದ ಪೂರ್ವ ವಲಯ ತಂಡಕ್ಕೆ ಇವರು ಉಪನಾಯಕರಾಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ಪರ ಆಡಿ 49 ರನ್ ಗಳಿಸಿದ್ದ ವೈಭವ್, ಸದ್ಯ ಬಿಹಾರದ ಪರ ಎರಡು ಪಂದ್ಯಗಳನ್ನು ಆಡಿದ ನಂತರ ನವೆಂಬರ್ 19ರಿಂದ ಕತಾರ್ನಲ್ಲಿ ಆರಂಭವಾಗಲಿರುವ ‘ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್’ ಟೂರ್ನಿಯಲ್ಲಿ ಭಾರತ ‘ಎ’ ತಂಡವನ್ನು ಸೇರಿಕೊಳ್ಳಲಿದ್ದಾರೆ.
ವೈಭವ್ ಹೆಸರಿನಲ್ಲಿ ಈಗಾಗಲೇ ಹಲವು ಭರ್ಜರಿ ದಾಖಲೆಗಳಿವೆ. ಕಳೆದ ವರ್ಷ ಮಹಾರಾಷ್ಟ್ರ ವಿರುದ್ಧ ಕೇವಲ 58 ಎಸೆತಗಳಲ್ಲಿ ಶತಕ ಸಿಡಿಸಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಇತಿಹಾಸದಲ್ಲಿ ಶತಕ ಬಾರಿಸಿದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಅಲ್ಲದೆ, 2025ರ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಸಿಡಿಲಬ್ಬರದ ಶತಕ ಸಿಡಿಸಿ, ಟಿ20 ಕ್ರಿಕೆಟ್ನಲ್ಲಿ ಶತಕ ಗಳಿಸಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಬ್ಯಾಟಿಂಗ್ ಜೊತೆಗೆ ಈಗ ನಾಯಕತ್ವದಲ್ಲೂ ಹೊಸ ಅಧ್ಯಾಯ ಬರೆದಿರುವ ವೈಭವ್, ಭಾರತೀಯ ಕ್ರಿಕೆಟ್ನ ಭವಿಷ್ಯದ ತಾರೆಯಾಗಿ ಮಿಂಚುತ್ತಿದ್ದಾರೆ.



