ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜನರನ್ನು ಚಿತ್ರಮಂದಿರಕ್ಕೆ ಕರೆತರಲು ಹತ್ತಾರು ಬಗೆಯ ಕ್ರಿಯೇಟಿವಿಟಿ ಬೇಕಾಗುತ್ತದೆ. ಜನರ ಗಮನ ಸೆಳೆಯುವಂತಹ ಶೀರ್ಷಿಕೆ ಹಾಗೂ ಪೋಸ್ಟರ್ ತುಂಬ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಹೊಸ ಚಿತ್ರತಂಡವೊಂದು ‘ವೈಕುಂಠ ಸಮಾರಾಧನೆ’ ಎಂಬ ಶೀರ್ಷಿಕೆಯಲ್ಲಿ ಸಿನಿಮಾ ಮಾಡಿದೆ. ಅದೇ ಥೀಮ್ನಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿದೆ.
‘ವೈಕುಂಠ ಸಮಾರಾಧನೆ’ ಸಿನಿಮಾದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ವೃತ್ತಿಯಲ್ಲಿ ಅಡ್ವೋಕೇಟ್ ಆಗಿರುವ ರಜತ್ ಮೌರ್ಯ ಅವರು ಚಿತ್ರರಂಗದ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಬಿಡುವಿನ ಸಮಯದಲ್ಲಿ ಅವರು ಅಭಿನಯ, ನಿರ್ದೇಶನ ಮುಂತಾದ ತರಬೇತಿ ಪಡೆದುಕೊಂಡು ಈಗ ಸಿನಿಮಾ ಕೆಲಸಕ್ಕೆ ಕೈ ಹಾಕಿದ್ದಾರೆ. ‘ವೈಕುಂಠ ಸಮಾರಾಧನೆ’ ಸಿನಿಮಾಗೆ ಅವರೇ ಹೀರೋ. ಜೊತೆಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಕೂಡ ಮಾಡುತ್ತಿದ್ದಾರೆ.
ಮಾಡೆಲ್ ಕೂಡ ಆಗಿರುವ ರಜತ್ ಮೌರ್ಯ ಅವರು ಜಾಹಿರಾತುಗಳಲ್ಲಿ ಕಾಣಿಸಿಕೊಂಡು ಅನುಭವ ಪಡೆದಿದ್ದಾರೆ. ಐಪಿಎಲ್ ಪಂದ್ಯಗಳ ವೇಳೆ ಅವರ ಜಾಹೀರಾತುಗಳು ಪ್ರಸಾರ ಆಗಿವೆ. ಈ ಎಲ್ಲ ಅನುಭವಗಳ ಆಧಾರದಲ್ಲಿ ಅವರು ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಕಲ್ಕಿ ಜಯಂತಿ ಶ್ರಾವಣ ಶನಿವಾರದ ಪ್ರಯುಕ್ತ ಈ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ‘ಗೇರ್‌ಗಲ್ ಫಿಲ್ಮ್ಸ್’ ಬ್ಯಾನರ್ ಮೂಲಕ ಆಶಾ ಗೇರ್‌ಗಲ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.
ಇತರೆ ಚಿತ್ರತಂಡಗಳು ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡುತ್ತವೆ. ಆದರೆ ‘ವೈಕುಂಠ ಸಮಾರಾಧನೆ’ ಚಿತ್ರದವರು ‘ಡೆತ್ ಲುಕ್ ಪೋಸ್ಟರ್’ ಬಿಡುಗಡೆ ಮಾಡಿದ್ದಾರೆ. ವೈಕುಂಠ ಸಮಾರಾಧನೆಯ ಆಮಂತ್ರಣ ಪತ್ರದ ಹಾಗೆಯೇ ಕಪ್ಪು-ಬಿಳುಪಿನ ವಿನ್ಯಾಸ ಇದರಲ್ಲಿದೆ. ಜನನ-ಮರಣ ದಿನಾಂಕಗಳ ಶೈಲಿಯಲ್ಲಿ ಮುಹೂರ್ತ ಹಾಗೂ ರಿಲೀಸ್ ಡೇಟ್ಗಳ ಮಾಹಿತಿಯನ್ನು ನೀಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಡೆತ್ ಲುಕ್ ಪೋಸ್ಟರ್ ವೈರಲ್ ಆಗಿದೆ. ಆ ಮೂಲಕ ಜನರ ಗಮನ ಸೆಳೆಯುವಲ್ಲಿ ಯಶಸ್ವಿ ಆಗಿದೆ.
ರಿತ್ವಿಕ್ ಮುರಳಿಧರ್ ಅವರು ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಛಾಯಾಗ್ರಹಣ ಹರ್ಷಿತ್ ಬಿ. ಗೌಡ ಅವರದ್ದು. ಕಾರ್ಯಕಾರಿ ನಿರ್ಮಾಪಕರಾಗಿ ನಾಗೇಂದ್ರ ಯಡಿಯಾಳ್ ಕೆಲಸ ಮಾಡುತ್ತಿದ್ದಾರೆ. ಆದರ್ಶ್ ಬೆಳ್ಳೂರು, ಸಿದ್ದಾನ್ ವಿಜಯ್, ದರ್ಶನ್ ಕುಮಾರ್, ನವೀನ್, ಸಚ್ಚಿನ್ ಅವರು ಡೈರೆಕ್ಷನ್ ಟೀಮ್ನಲ್ಲಿದ್ದಾರೆ. ಮಲೆನಾಡಿನಲ್ಲಿ ಶೇಕಡ 60ರಷ್ಟು ಹಾಗೂ ಬೆಂಗಳೂರು ಸುತ್ತಮತ್ತ ಇನ್ನುಳಿದ ದೃಶ್ಯಗಳ ಶೂಟಿಂಗ್ ಮಾಡಲು ನಿರ್ಧರಿಸಲಾಗಿದೆ.