January21, 2026
Wednesday, January 21, 2026
spot_img

ದೆಹಲಿ ಕಾರು ಸ್ಫೋಟ ಖಂಡಿಸಿದ ಅಮೆರಿಕ, ಚೀನಾ ಸೇರಿ ವಿವಿಧ ದೇಶಗಳು: ಭಾರತದ ಜನರೊಂದಿಗೆ ನಿಲ್ಲುತ್ತೇವೆ ಎಂದ ವಿಶ್ವ ನಾಯಕರು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ಸಂಭವಿಸಿದ ಕಾರು ಸ್ಫೋಟಕ್ಕೆ ಅಮೆರಿಕ, ಚೀನಾ, ಜಪಾನ್ ಮತ್ತು ಇಸ್ರೇಲ್ ಸೇರಿದಂತೆ ವಿಶ್ವದಾದ್ಯಂತ ಹಲವು ನಾಯಕರು ಮಂಗಳವಾರ ಖಂಡಿಸಿದ್ದು, ಕಳವಳ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆ ಬಳಿ ಸೋಮವಾರ ಸಂಜೆ ಸಂಭವಿಸಿದ ಕಾರು ಸ್ಫೋಟದಲ್ಲಿ ಕನಿಷ್ಠ 12 ಜನ ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಸ್ಫೋಟದ ಬಗ್ಗೆ ಸಂತಾಪ ಸೂಚಿಸಿದ ಅಮೆರಿಕ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವುದನ್ನು ಮುಂದುವರೆಸಿದೆ ಎಂದು ಹೇಳಿದೆ.

ದೆಹಲಿಯಲ್ಲಿ ನಡೆದ ಭೀಕರ ಸ್ಫೋಟದಲ್ಲಿ ಮೃತಪಟ್ಟವರೊಂದಿಗೆ ನಮ್ಮ ಹೃದಯಗಳು ಇವೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದೇವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನಮ್ಮ ಪ್ರಾಮಾಣಿಕ ಸಂತಾಪಗಳು. ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ” ಎಂದು ವಿದೇಶಾಂಗ ಇಲಾಖೆಯ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಬ್ಯೂರೋ ಪೋಸ್ಟ್‌ ಮಾಡಿದೆ.

ಚೀನಾ ಕೂಡ ಆಘಾತ ವ್ಯಕ್ತಪಡಿಸಿದೆ. ಈ ಘಟನೆಯಿಂದ ನಮಗೆ ಆಘಾತವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಬೀಜಿಂಗ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂತ್ರಸ್ತರಿಗೆ ಸಂತಾಪ ಸೂಚಿಸಿದ ಅವರು, ಮೃತರ ಕುಟುಂಬಗಳಿಗೆ ಮತ್ತು ಗಾಯಗೊಂಡವರಿಗೆ ಪ್ರಾಮಾಣಿಕ ಸಹಾನುಭೂತಿ ವ್ಯಕ್ತಪಡಿಸಿದರು ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.

ಜಪಾನ್ ಪ್ರಧಾನಿ ಸನೇ ತಕೈಚಿ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ,’ಸ್ಫೋಟದಲ್ಲಿ ಅನೇಕ ಅಮೂಲ್ಯ ಜೀವಗಳು ಬಲಿಯಾಗಿವೆ ಎಂದು ತಿಳಿದು ತೀವ್ರ ದುಃಖವಾಯಿತು’. ಸಂತ್ರಸ್ತರು ಮತ್ತು ದುಃಖಿತ ಕುಟುಂಬಗಳಿಗೆ ಸಂತಾಪ ಸೂಚಿಸಿದ ಅವರು, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದರು.

ದೆಹಲಿಯಲ್ಲಿ ಸಂಭವಿಸಿದ ಸ್ಫೋಟದ ಸುದ್ದಿ ಕೇಳಿ ದುಃಖವಾಯಿತು. ಶ್ರೀಲಂಕಾ ಭಾರತದ ಜನರೊಂದಿಗೆ ನಿಲ್ಲುತ್ತದೆ. ಬಾಧಿತರಾದ ಎಲ್ಲರೊಂದಿಗೆ ನಮ್ಮ ಆಲೋಚನೆಗಳು ಇವೆ ಎಂದು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Must Read