ಕೂರ್ಗ್ ರೆಜಿಮೆಂಟ್ ನತ್ತ ಯುವಕರನ್ನು ಸೆಳೆಯಲು ಹಲವಾರು ಕ್ರಮ: ಮಂಡೇಟಿರ ಸುಬ್ರಮಣಿ

ಹೊಅಸದಿಗಂತ ವರದಿ, ಶ್ರೀಮಂಗಲ(ಕೊಡಗು)
ಒಂದು ಕಾಲದಲ್ಲಿ ಭದ್ರತಾ ಪಡೆಯಲ್ಲಿ ಅತಿ ಹೆಚ್ಚು ಸಾಧನೆ ಮಾಡಿ ಹೆಸರು ಗಳಿಸಿದ 31ನೇ ಕೂರ್ಗ್ ರೆಜಿಮೆಂಟ್‍ನ ಹೆಸರನ್ನು ಉಳಿಸುವ ಸಲುವಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅದಕ್ಕಾಗಿ 31ನೇ ಕೂರ್ಗ್ ರೆಜಿಮೆಂಟ್ ಹೆಸರಿನ ಹ್ಯಾಟ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ‘ವಿಕೇರ್ ಎಕ್ಸ್ ಸರ್ವಿಸ್ ಮ್ಯಾನ್ ಟ್ರಸ್ಟ್ ಅಧ್ಯಕ್ಷ ಹಾಗೂ ಕಾನೂನು ಸಲಹೆಗಾರ ಮಂಡೇಟಿರ ಸುಬ್ರಮಣಿ ತಿಳಿಸಿದರು.
ಟಿ.ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಮಹಾಸಭೆಯಲ್ಲಿ ಮಾತನಾಡಿದ ಅವರು, ಕೆಲವು ವರ್ಷಗಳ ಹಿಂದೆ ಅತಿ ಹೆಚ್ಚು ಸಂಖ್ಯೆಯಲ್ಲಿ ಕೂರ್ಗ್ ರೆಜಿಮೆಂಟ್‍ಗೆ ಕೊಡಗಿನ ಯುವಕರು ಸೇರುತ್ತಿದ್ದರು. ಹಾಗೂ ಬಲಿಷ್ಠ ರೆಜಿಮೆಂಟ್ ಎಂಬ ಹೆಸರನ್ನೂ ಗಳಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸೇನೆಗೆ ಸೇರುವವರ ಸಂಖ್ಯೆಯೇ ಕಡಿಮೆಯಾಗಿದ್ದು, ಕೂರ್ಗ್ ರೆಜಿಮೆಂಟ್‍ಗೆ ಸೇರುವವರು ಕೂಡಾ ಕಡಿಮೆಯಾಗಿದ್ದಾರೆ ಎಂದು ವಿಷಾದಿಸಿದರು.
ಕೂರ್ಗ್ ರೆಜಿಮೆಂಟ್‍ನ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಲು ಕೊಡವ ಲಾಂಛನದೊಂದಿಗೆ ಕೂರ್ಗ್ ರೆಜಿಮೆಂಟ್‍ನ ಲಾಂಛನವಿರುವ ಹ್ಯಾಟ್ ತಯಾರಿಸಿ ಮಡಿಕೇರಿಯ ಜನರಲ್ ತಿಮ್ಮಯ್ಯ ವಾರ್ ಮೆಮೋರಿಯಲ್ ಸೇರಿದಂತೆ ವಿವಿಧೆಡೆ ಮಾರಾಟಕ್ಕೆ ಇಡಲಾಗುವುದು. ಇದರ ಪ್ರಾಥಮಿಕ ಖರ್ಚು ವೆಚ್ಚವನ್ನು ಟಿ.ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್‍ ಭರಿಸಲಿದ್ದಾರೆ. ಹ್ಯಾಟ್‍ನ ಮಾರಾಟಕ್ಕೆ ತಾವೆಲ್ಲರೂ ಸಹಕರಿಸಬೇಕೆಂದು ಕೋರಿದರು.
ವಿಧವೆಯರಿಗೆ ಪೆನ್ಷನ್:
ಮೃತಪಟ್ಟ ಮಾಜಿ ಸೈನಿಕರ ಪತ್ನಿಯರಿಗೆ ಪೆನ್ಷನ್ ಸಿಗದೇ ತೊಂದರೆಯಾಗುತ್ತಿದ್ದು, ಆಧಾರ್ ಕಾರ್ಡ್, ಪಾನ್‍ಕಾರ್ಡ್’ನಲ್ಲಿರುವಂತೆಯೇ ಹೆಸರು ಬದಲಾವಣೆ ಮಾಡಿಕೊಂಡು ಮೂಲ ದಾಖಲಾತಿಯ ಪ್ರತಿಗಳನ್ನು ತಮ್ಮ ಸಂಸ್ಥೆಗೆ ಕಳುಹಿಸಿಕೊಟ್ಟರೆ ಪೆನ್ಷನ್ ಬರುವಂತೆ ಮಾಡಲು ಸಹಕರಿಸಲಾಗುವುದು ಎಂದರು.
ಮಾಜಿ ಸೈನಿಕ ಹಾಗೂ ಹಿರಿಯರಾದ ಕಾಳಿಮಾಡ ಮುತ್ತಣ್ಣ ಮಾತನಾಡಿ, ಕೊಡಗಿನಲ್ಲಿ ಅತ್ಯುತ್ತಮ ಮಾಜಿ ಸೈನಿಕರ ಸಂಘ ಎಂದು ಹೆಸರು ಪಡೆದಿರುವ ಟಿ.ಶೆಟ್ಟಿಗೇರಿ ಮಾಜಿ ಸೈನಿಕರ ಸಂಘವು ಹಲವು ಜನಪರ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಮೇ 29ರಂದು ಮಾಜಿ ಸೈನಿಕರ ಸಂಸಾರಸ್ಥರೆಲ್ಲರೂ ಸೇರಿ ಸಂತೋಷ ಕೂಟ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಈ ಸಂದರ್ಭ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್ ಅವರು, ಮಾಜಿ ಸೈನಿಕರಿಗೆ ಜಾಗ ಮಂಜೂರು ಮಾಡದೇ ಇರುವುದರ ಬಗ್ಗೆ ಉಸ್ತುವಾರಿ ಸಚಿವ ನಾಗೇಶ್ ಅವರೊಂದಿಗೆ ಚರ್ಚಿಸಿದ ನಂತರ ತಕ್ಷಣವೇ ಮಾಜಿ ಸೈನಿಕರಿಗೆ ಜಾಗ ಮಂಜೂರು ಮಾಡುವುದು ಸೇರಿದಂತೆ ಅವರ ಸಮಸ್ಯೆಗೆ ಸ್ಪಂದಿಸಬೇಕೆಂದು ಜಿಲ್ಲಾಧಿಕಾರಿಗಳು ಕಟ್ಟಪ್ಪಣೆ ಮಾಡಿದ್ದಾರೆ.
ತಿಂಗಳಿಗೊಂದು ಸಭೆ ನಡೆಸಿ ಮಾಜಿ ಸೈನಿಕರ ಕುಂದುಕೊರತೆ ಪರಿಹರಿಸಲು ಸೂಚನೆ ನೀಡಲಾಗಿದೆ. ಅದರಂತೆ ಜಾಗ ಇಲ್ಲದ ಮಾಜಿ ಸೈನಿಕರಿಗೆ ಮನೆ ನಿವೇಶನ ನೋಡಲು ತೀರ್ಮಾನವಾಗಿದ್ದು, ಏಪ್ರಿಲ್ 30ರೊಳಗೆ ಜಿಲ್ಲಾ ಸೈನಿಕ್ ಬೋರ್ಡ್’ಗೆ ಅರ್ಜಿ ಸಲ್ಲಿಸಬಹುದು. ಸೈನಿಕ್ ಬೋರ್ಡ್ ನ ಸದಸ್ಯರಾಗದವರು ತಕ್ಷಣ ಸದಸ್ಯರಾಗಲು ಹಾಗೂ ಈಗಿರುವ ಪಿ.ಪಿ.ಓ ಕಾರ್ಡ್‌ನ ಬದಲು ಇ.ಪಿ.ಪಿ.ಓ ಕಾರ್ಡ್ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಮನ್ನೇರ ರಮೇಶ್, ಕಾರ್ಯದರ್ಶಿ ಉಳುವಂಗಡ ಗಣಪತಿ, ಖಜಾಂಚಿ ಚಂಗುಲಂಡ ಸತೀಶ್, ಸ್ಥಾಪಕ ಅಧ್ಯಕ್ಷ ಚಟ್ಟಂಡ ಕಾರ್ಯಪ್ಪ, ನಿರ್ದೇಶಕರಾದ ಕೈಬುಲೀರ ಪಾರ್ವತಿ ಬೋಪಯ್ಯ, ಚೆಟ್ಟಂಗಡ ಪುಣ್ಯವತಿ, ಮಾಚಮಾಡ ಮನು ಕುಶಾಲಪ್ಪ, ಮೀದೇರಿರ ಸುರೇಶ್, ಮಂದಮಾಡ ಗಣೇಶ್, ಚೊಟ್ಟೆಯಾಂಡಮಾಡ ಗೋಕುಲ ಹಾಜರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!