ದೇಶದ ಈ ಪ್ರದೇಶಗಳಲ್ಲಿ ಮುಂದುವರೆದಿದೆ ವರುಣಾರ್ಭಟ: ಹಲವು ಪ್ರದೇಶಗಳು ಜಲಾವೃತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಉತ್ತರಾಖಂಡದಿಂದ ಕೆರಳ ರಾಜ್ಯದವರೆಗೆ ದೇಶದ ಹಲವು ಭಾಗಗಳಲ್ಲಿ ವರುಣಾರ್ಭಟ ಮುಂದುವರೆದಿದೆ. ಕಳೆದ ಕೆಲ ದಿನಗಳಿಂದ ಮುಂದುವರೆಯುತ್ತಿರುವ ಭಾರೀ ಮಳೆಯಿಂದ ಹಠಾತ್‌ ಪ್ರವಾಹವುಂಟಾಗಿದ್ದು ನದಿಗಳು ಉಕ್ಕಿ ಹರಿಯುತ್ತಿವೆ.

ತಮಿಳುನಾಡು ಮತ್ತು ಉತ್ತರಪ್ರದೇಶದಂತಹ ರಾಜ್ಯಗಳಲ್ಲಿಯೂ ನಿರಂತರ ಮಳೆ ವರದಿಯಾಗಿದೆ. ಯುಪಿಯಲ್ಲಿ, ಗಂಗಾ ನದಿಯು ಹಲವಾರು ಪ್ರದೇಶಗಳಲ್ಲಿ ಅಪಾಯದ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿದ್ದು, ವಾರಣಾಸಿ, ಘಾಜಿಪುರ, ಮಿರ್ಜಾಪುರ ಮತ್ತು ಬಲಿಯಾದಲ್ಲಿ ತಗ್ಗು ಪ್ರದೇಶಗಳಲ್ಲಿ ಮುಳುಗಡೆಯಾಗಿದೆ.

ಇದಲ್ಲದೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಸೋಮವಾರ ಭೂಕುಸಿತದಿಂದ ಮನೆಯೊಂದು ಕೊಚ್ಚಿಕೊಂಡು ಹೋಗಿದ್ದು, ಇದರಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ನಾಪತ್ತೆಯಾಗಿದ್ದಾರೆ. ಭಾನುವಾರ ಮಧ್ಯರಾತ್ರಿಯಿಂದ ಅಭೂತಪೂರ್ವ ಮಳೆ ಸುರಿದಿದ್ದು, ಕೊಟ್ಟಾಯಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ.

ಭಾನುವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಉತ್ತರಾಖಂಡದ ಡೆಹ್ರಾಡೂನ್‌ನ ಕಠ್‌ಬಾಂಗ್ಲಾದಲ್ಲಿ ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಮೂವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಕೈಗೊಂಡಿದೆ.

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ಮುಂದಿನ ಎರಡು ದಿನಗಳ ಕಾಲ ತಮಿಳುನಾಡಿನ ಹಲವು ಭಾಗಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಮಳೆಯ ಎಚ್ಚರಿಕೆ ಹಿನ್ನೆಲೆಯಲ್ಲಿ ಹೊಸೂರು ಮತ್ತು ತೆಂಕಣಿಕೋಟೆ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ವಾರಣಾಸಿಯಲ್ಲಿ ಭಾನುವಾರ ಗಂಗಾನದಿಯ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಹೆಚ್ಚಿದೆ. ಅಪಾಯದ ಮಟ್ಟಕ್ಕಿಂತ 74 ಸೆಂ.ಮೀ ಎತ್ತರದಲ್ಲಿ ನದಿ ಹರಿಯುತ್ತಿದೆ. ನದಿ ಮತ್ತು ಅದರ ಉಪನದಿಗಳ ದಡದಲ್ಲಿರುವ ಅನೇಕ ಕೃಷಿ ಮತ್ತು ವಸತಿ ಪ್ರದೇಶಗಳು ಜಲಾವೃತಗೊಂಡಿವೆ. ಜಿಲ್ಲೆಯಲ್ಲಿ ಗಂಗಾ ಮತ್ತು ಅದರ ಉಪನದಿ ವರುಣಾ ಪ್ರವಾಹದಿಂದ 18 ಪುರಸಭೆಯ ವಾರ್ಡ್‌ಗಳು ಮತ್ತು 80 ಕ್ಕೂ ಹೆಚ್ಚು ಹಳ್ಳಿಗಳು ಹಾನಿಗೊಳಗಾಗಿವೆ ಮತ್ತು ಜಿಲ್ಲೆಯಲ್ಲಿ 228.69 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತವು ಪ್ರಕಟಣೆಯಲ್ಲಿ ತಿಳಿಸಿದೆ ಎಂಉದ ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!