October 15, 2026
Thursday, October 15, 2026
spot_img

ಕಾಂಗ್ರೆಸ್ ಪರ್ವ ಆರಂಭ: ಕೇರಳದ 13ನೇ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಅಧಿಕಾರ ಸ್ವೀಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಹತ್ತು ದಿನಗಳ ಕಾಲ ನಡೆದ ತೀವ್ರ ರಾಜಕೀಯ ಕಸರತ್ತುಗಳ ಬಳಿಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು ಸೋಮವಾರ ಕೇರಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ರಾಜಧಾನಿ ತಿರುವನಂತಪುರಂನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಕೇರಳದ ಗೌರವಾನ್ವಿತ ರಾಜ್ಯಪಾಲರಾದ ಆರ್.ವಿ. ಅರ್ಲೇಕರ್ ಅವರು ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಅಧಿಕೃತವಾಗಿ ಆಡಳಿತದ ಚುಕ್ಕಾಣಿ ಹಿಡಿದಿದೆ.

ಹತ್ತು ದಿನಗಳ ನಂತರ ಮುಗಿದ ಸಸ್ಪೆನ್ಸ್

ಚುನಾವಣಾ ಫಲಿತಾಂಶ ಬಂದ ದಿನದಿಂದಲೇ ಮುಖ್ಯಮಂತ್ರಿ ಹುದ್ದೆಗೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಹೈಕಮಾಂಡ್ ನಾಯಕರ ಸುದೀರ್ಘ ಚರ್ಚೆ ಹಾಗೂ ಆಂತರಿಕ ಸಮಾಲೋಚನೆಗಳ ನಂತರ ಅಂತಿಮವಾಗಿ ವಿ.ಡಿ. ಸತೀಶನ್ ಅವರ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಅಂತಿಮಗೊಳಿಸಲಾಗಿತ್ತು. ಸತೀಶನ್ ಅವರ ನೇತೃತ್ವದಲ್ಲಿ ಕೇರಳದಲ್ಲಿ ನೂತನ ಸರ್ಕಾರ ರಚನೆಯಾಗಿದ್ದು, ಇಡೀ ಸಚಿವ ಸಂಪುಟ ಒಟ್ಟಿಗೆ ಪ್ರಮಾಣ ವಚನ ಸ್ವೀಕರಿಸಿರುವುದು ಈ ಬಾರಿಯ ವಿಶೇಷತೆಯಾಗಿದೆ. ಹೊಸ ಸರ್ಕಾರದ ಮೇಲೆ ಕೇರಳದ ಜನತೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Must Read