ಕೇವಲ ದಾಖಲೆ ಪರಿಶೀಲಿಸೋಕೆ ಅಂತ ಟ್ರಾಫಿಕ್ ಪೊಲೀಸರು ವಾಹನ ಅಡ್ಡಹಾಕುವಂತಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನಲ್ಲಿ ದಾಖಲೆ ಪರಿಶೀಲನೆ ನೆಪದಲ್ಲಿ ಟ್ರಾಫಿಕ್‌ ಪೊಲೀಸರು ವಾಹನ ಸವಾರರಿಗೆ ಉಂಟುಮಾಡುತ್ತಿದ್ದ ಕಿರಿಕಿರಿಗೆ ಇದೀಗ ಬ್ರೇಕ್‌ ಬಿದ್ದಿದೆ. ಈ ನಿಯಮದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆ ಬೆಂಗಳೂರು ಪೊಲೀಸರು ಹೊಸ ನಿಯಮ ಜಾರಿಮಾಡಿದ್ದಾರೆ.

ಸಾರ್ವಜನಿಕರಿಂದ ಅತಿ ಹೆಚ್ಚು ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, ಡ್ರಿಂಕ್ ಆಂಡ್ ಡ್ರೈವ್ ಮಾಡುವ ವಾಹನಗಳಿಗೆ ಮಾತ್ರ ತಪಾಸಣೆ ನಡೆಸಿ. ಕಣ್ಣಿಗೆ ಕಾಣುವಂತೆ ರೂಲ್ಸ್ ಬ್ರೇಕ್ ಮಾಡುವಂತಹ ವಾಹನಗಳನ್ನು ತಡೆದು ಪರಶೀಲಿಸಿ ಎಂದು ಪೊಲೀಸರಿಗೆ ಸೂಚಿಸಿದ್ದಾರೆ. ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ತಡೆದು ಸುಖಾ ಸುಮ್ಮನೆ ಪರಿಶೀಲನೆ ನಡೆಸುವಂತಿಲ್ಲ ಎಂದಿದ್ದಾರೆ.

ಈ ಕುರಿತು ಆದೇಶ ಹೊರಡಿಸಿರುವ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ, ʻವಿನಾಕಾರಣ ಟ್ರಾಫಿಕ್‌ ಪೊಲೀಸರು ವಾಹನ ತಡೆದು ನಿಲ್ಲಿಸುವಂತಿಲ್ಲ. ಯಾವುದೇ ಕಾನೂನು, ಸಂಚಾರ ನಿಯಮ ಉಲ್ಲಂಘಿಸಿದರೆ ಮಾತ್ರ ವಾಹನ ತಡೆಯಬೇಕು. ಈ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದು, ದಾಖಲೆ ಪರಿಶೀಲನೆ ನಡೆಸಲು ವಾಹನ ತಡೆದರೆ ಕೂಡಲೇ ಸ್ಥಳ, ದಿನಾಂಕ, ಸಮಯವನ್ನು ನಮಗೆ ಪೋಸ್ಟ್‌ ಮಾಡಿ ಅಂತಹ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆʼ ಎಂದಿದ್ದಾರೆ.

ಈ ಬಗ್ಗೆ ಸಂಚಾರಿ ಪೊಲೀಸ್ ಜಂಟಿ ಆಯುಕ್ತ ಬಿ.ಆರ್ ರವಿಕಾಂತೇಗೌಡ ಸಹ ಪ್ರತಿಕ್ರಿಯೆ ನೀಡಿದ್ದು, ದಾಖಲೆಗಳ ಪರಿಶೀಲನೆಗಾಗಿ ವಾಹನಗಳನ್ನು ನಿಲ್ಲಿಸದಿರುವ ನೀತಿ ಕಟ್ಟುನಿಟ್ಟಾಗಿ ಜಾರಿಯಾಗಿದೆ. ಇದನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಹಲಸೂರು ಗೇಟ್ ಪೊಲೀಸ್‌ ಸ್ಟೇಷನ್‌ನ ಒಬ್ಬ ಎಎಸ್‌ಐ ಮತ್ತು ಒಬ್ಬ ಹೆಡ್‌ ಕಾನ್ಸ್‌ಟೇಬಲ್‌ ಅನ್ನು ಅಮಾನತುಗೊಳಿಸಲಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!