ವೇದ ಮೂರ್ತಿ ಪಳ್ಳತಡ್ಕ ಪರಮೇಶ್ವರ ಭಟ್ ವಿಧಿವಶ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಸರಗೋಡು ಜಿಲ್ಲೆಯ ಬದಿಯಡ್ಕ ಸಮೀಪದ ಪಳ್ಳತ್ತಡ್ಕ ನಿವಾಸಿ, ಹಿರಿಯ ವೇದ ವಿದ್ವಾಂಸರಾಗಿದ್ದ ವೇ.ಮೂ. ಪಳ್ಳತಡ್ಕ ಪರಮೇಶ್ವರ ಭಟ್ ಭಾನುವಾರ ರಾತ್ರಿ 7.30ರ ವೇಳೆಗೆ ಉಡುಪಿಯ ಪುತ್ರನ ಮನೆಯಲ್ಲಿ ನಿಧನ ಹೊಂದಿದರು. ಅವರಿಗೆ 84 ವರ್ಷ ಪ್ರಾಯವಾಗಿತ್ತು.

ಮೃತರು ಪತ್ನಿ ಜಾಹ್ನವಿ, ಪುತ್ರರಾದ ಸುಬ್ರಹ್ಮಣ್ಯ, ಶಿವಶಂಕರ, ಶಶಿಧರ, ಪುತ್ರಿ ಶೈಲಜಾ ಹಾಗೂ ೫ ಮಂದಿ ಸಹೋದರರು, 6 ಮಂದಿ ಸಹೋದರಿಯರು ಅಲ್ಲದೆ ಅಪಾರ ಶಿಷ್ಯಂದಿರು, ಬಂಧು ಬಳಗವನ್ನು ಅಗಲಿದ್ದಾರೆ.

ಖ್ಯಾತ ವಿದ್ವಾಂಸರಾಗಿದ್ದ ಅವರು, ಹಿಂದೂ ಸಮಾಜದ ಉನ್ನತಿಗೆ ವಿಶೇಷ ಕೊಡುಗೆಗಳನ್ನು ಸಲ್ಲಿಸಿದ್ದರು. ವಿವಿಧ ಮಂದಿರಗಳಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವಗಳನ್ನು ನೆರವೇರಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕರಾಗಿದ್ದ ಅವರು, ಸಂಘದ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು.ಪ್ರಸಿದ್ಧ ಯಕ್ಷಗಾನ ಅರ್ಥಧಾರಿಯೂ ಆಗಿದ್ದರು.

1940 ರಲ್ಲಿ ಪ್ರಸಿದ್ಧ ಕಿಲಿಂಗಾರು ವೈದಿಕ ಕುಟುಂಬದ ವೇ.ಬ್ರ.ಸುಬ್ರಾಯ ಭಟ್ಟ-ಪರಮೇಶ್ವರಿ ಅಮ್ಮ ದಂಪತಿಯ ಹಿರಿಯ ಪುತ್ರರಾಗಿ ಜನಿಸಿದ ಅವರು , ಮದುರೆಯ ತಿರುವೇಂಗಡಂ ಗುರುಕುಲ ಕುಂಭಕೋಣಂನಲ್ಲಿ ವ್ಯಾಪಕ ಅಧ್ಯಯನ ನಡೆಸಿ ವೇದಶಾಸ್ತ್ರಗಳಲ್ಲಿ ಪಾರಾಂಗತರಾಗಿದ್ದರು. ಸಾಮಾಜಿಕ, ರಾಷ್ಟ್ರೀಯ ಚಿಂತನೆಯೊಂದಿಗೆ ವೇದೋಪಾಸನೆಗೈಯ್ಯುತ್ತಿದ್ದ ಅವರು , ಸನಾತನ ಹಿಂದು ಧರ್ಮಜಾಗೃತಿ ಕಾರ್ಯಕ್ಕೆ ತಮ್ಮ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ಪುತ್ರಕಾಮೇಷ್ಠಿ ಯಾಗ ಸೇರಿದಂತೆ ವಿವಿಧ ಯಜ್ಞಯಾಗಾದಿಗಳಿಗೆ ಮಾರ್ಗದರ್ಶನ ಮಾಡಿದ್ದರು.

ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರ ಭಾರತೀ ಸ್ವಾಮೀಜಿಯವರ ಅತ್ಯಂತ ಪ್ರಿಯ ಶಿಷ್ಯರಾಗಿದ್ದ ಪರಮೇಶ್ವರ ಭಟ್ ಅವರು , ಶೃಂಗೇರಿ, ಶ್ರೀರಾಮಚಂದ್ರಾಪುರ ಮಠ ಸೇರಿದಂತೆ ವಿವಿಧ ಮಠ ಮಂದಿರಗಳು, ಸಂಘಸಂಸ್ಥೆಗಳ ಅನೇಕ ಪ್ರಶಸ್ತಿ, ಗೌರವಗಳಿಗೆ ಭಾಜನರಾಗಿದ್ದರು.

ಹೊಸದಿಗಂತ ಬಗ್ಗೆ ಅಪಾರ ಪ್ರೀತಿ
ವೇ.ಮೂ.ಪಳ್ಳತ್ತಡ್ಕ ಪರಮೇಶ್ವರ ಭಟ್ ಅವರು “ಹೊಸದಿಗಂತ “ದ ಬಗ್ಗೆ ಅಪಾರ ಪ್ರೀತಿ, ಕಾಳಜಿ ಹೊಂದಿದ್ದರು. ಹೊಸದಿಗಂತ ಕಚೇರಿಯಲ್ಲಿ ವರ್ಷಂಪ್ರತಿ ನಡೆಯುವ ಲಕ್ಷ್ಮೀಪೂಜೆಗೆ ತಪ್ಪದೆ ಆಗಮಿಸಿ ಆಶೀರ್ವದಿಸುತ್ತಿದ್ದರು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!