ವಾಹನ ಕಳವು ಪ್ರಕರಣ: ಕಾಸರಗೋಡಿನ ಇಬ್ಬರ ಬಂಧನ

ಹೊಸ ದಿಗಂತ ವರದಿ, ಮಡಿಕೇರಿ:

ಕೊಡಗಿನ ನಾಪೋಕ್ಲುವಿನಿಂದ ವಾಹನ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರರಾಜ್ಯ ವಾಹನ ಕಳ್ಳರಿಬ್ಬರನ್ನು ಬಂಧಿಸಿರುವ ಜಿಲ್ಲಾ ಅಪರಾಧ ಪತ್ತೆ‌ ದಳ ಹಾಗೂ ನಾಪೋಕ್ಲು ಪೊಲೀಸ್ ಠಾಣೆಯ ಸಿಬ್ಬಂದಿಗಳು ಕಳವು ಮಾಡಲಾಗಿದ್ದ‌ ಮಹೀಂದ್ರಾ ಬೊಲೇರೊ ಪಿಕಪ್ ವಾಹನ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಕಾಸರಗೋಡು ಕುಳಿಕಿನ್ನುವಿನ ರಂಷಾನ್ ಅಲಿಯಾಸ್ ಮೊಟ್ಟೆ ಅಲಿಯಾಸ್ ಸಾನು (24 ) ಹಾಗೂ ಕಾಸರಗೋಡು ವಿದ್ಯಾನಗರ‌ದ ಆಟೋ ಚಾಲಕ ಮೊಹಮ್ಮದ್ ಸಮೀರ್ (29) ಎಂದು ಗುರುತಿಸಲಾಗಿದೆ.
ಆರೋಪಿ ರಂಷಾನ್ ಕೂಲಿ ಕೆಲಸದವನಾಗಿದ್ದರೂ, ಕುಖ್ಯಾತ ವಾಹನ ಕಳ್ಳನೆನ್ನಲಾಗಿದ್ದು ಈತನ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ, ಸುಳ್ಯ, ಉಳ್ಳಾಲ, ಮೂಡಬಿದ್ರೆ ಪೊಲೀಸ್ ಠಾಣೆಗಳಲ್ಲಿ ಮಾತ್ರವಲ್ಲದೆ ಹಾಸನ ಜಿಲ್ಲೆ ಹಾಗೂ ಕೇರಳ ರಾಜ್ಯದ ಬೇಕಲ್ ಕಾಸರಗೋಡು,ವಿದ್ಯಾನಗರ ಕಣ್ಣನೂರು ಮತ್ತು ತ್ರಿಶೂರ್ ಠಾಣೆಗಳಲ್ಲಿ ಕೇಸು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ: ನಾಪೋಕ್ಲು ಪಟ್ಟಣದ ಕಾಂಪ್ಲೆಕ್ಸ್ ವೊಂದರ ಬಳಿ ರಾತ್ರಿ ನಿಲ್ಲಿಸಿದ್ದ ಮಹೀಂದ್ರಾ ಬೊಲೇರೊ ಪಿಕಪ್ ವಾಹವನ್ನು ಮೇ 14ರಂದು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿ ವಾಹನದ ಮಾಲಕರು ನಾಪೋಕ್ಲು ಪೊಲೀಸ್ ಠಾಣೆಗೆ ದೂರು ನೀಡಿದ್ದರು.. ಅದರ ಅನ್ವಯ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿ ತನಿಖೆಯಲ್ಲಿತ್ತು. ಪ್ರಕರಣದಲ್ಲಿ ಕಳವಾದ ಪಿಕಪ್ ವಾಹನದ ಪತ್ತೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ ಕೊಡಗು ಡಿಸಿಆರ್‌ಬಿ ಮತ್ತು ನಾಪೋಕ್ಲು ಪೊಲೀಸರು ಈ ವಾಹನ ಕೇರಳದ ಕಾಸರಗೋಡಿನಲ್ಲಿರುವುದನ್ನು ಪತ್ತೆ ಮಾಡಿದ್ದಲ್ಲದೆ, ಮೂಲದ ವ್ಯಕ್ತಿಗಳಿಬ್ಬರನ್ನು ಬಂಧಿಸಿ ಕಳ್ಳತನವಾಗಿದ್ದ ಮಹೀಂದ್ರಾ ಬೊಲೇರೊ ಪಿಕಪ್ ವಾಹನ ಹಾಗೂ ಕಳ್ಳತನ ಮಾಡಲು ಬಳಸಿದ ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ವಾಹನಗಳ ಒಟ್ಟು ಮೌಲ್ಯ 8 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಪೊಲೀಸ್ ಅಧೀಕ್ಷಕ ಎಂ.ಎ. ಅಯ್ಯಪ್ಪ ಹಾಗೂ ಮಡಿಕೇರಿ ಉಪವಿಭಾಗದ ಡಿವೈಎಸ್ ಪಿ ಜಿ.ಎಸ್ ಗಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಡಿಸಿಆರ್‌ಬಿ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಾಪೋಕ್ಲು ಠಾಣೆಯ ಪಿಎಸ್‌ಐ ಸದಾಶಿವ ಮತ್ತು ಡಿಸಿಆರ್ ಬಿ ಸಿಬ್ಬಂದಿಗಳಾದ ವೆಂಕಟೇಶ್, ಯೊಗೇಶ್ ಕುಮಾರ್, ನಿರಂಜನ್,ವಸಂತ, ಅನಿಲ್ ಕುಮಾರ್, ಸುರೇಶ್, ಶರತ್ ರೈ, ಚಾಲಕ ಶಶಿಕುಮಾರ್ ನಾಪೋಕ್ಲು ಪೊಲೀಸ್ ಠಾಣೆಯ ರವಿಕುಮಾರ್‌,ಸಾಜನ್, ನವೀನ್ ಮತ್ತು ಸಿಡಿಆರ್ ಸೆಲ್‌ನ ರಾಜೇಶ್, ಗಿರೀಶ್ ಹಾಗೂ ಪ್ರವೀಣ್ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!