ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೆಂಗಲ್ ಚಂಡಮಾರುತಕ್ಕೆ ತಮಿಳುನಾಡು-ಪುದುಚ್ಚೆರಿಯಲ್ಲಿ ಜಲ ಪ್ರಳಯವೇ ಉನ್ನತಾಗಿದ್ದು, ಶನಿವಾರ ಅರ್ಧರಾತ್ರಿಯೇ ಪುದುಚ್ಚೇರಿ ಸಮೀಪ ತೀರ ದಾಟಿದ ಫೆಂಗಲ್ ಭಾನುವಾರ ಮಧ್ಯಾಹ್ನದವರೆಗೂ ಅಂದರೆ ಬರೋಬ್ಬರಿ 17 ಗಂಟೆ ಸಮಯ ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಗಂಟೆಗೆ 90 ಕಿಮೀ ವೇಗದಲ್ಲಿ ಬೀಸಿದ ರಣಗಾಳಿಗೆ ಮಳೆ ಜೊತೆಯಾದ ಪರಿಣಾಮ ಪುದುಚ್ಚೆರಿ ಅಲ್ಲೋಲ ಕಲ್ಲೋಲ ಪರಿಸ್ಥಿತಿ ನಿರ್ಮಾಣವಾಗಿದೆ.
510 ಮಿಲಿಮೀಟರ್ ಮಳೆಗೆ ರಸ್ತೆಗಳು, ಕಾಲನಿಗಳು ಜಲಾವೃತವಾಗಿವೆ. ವಾಹನಗಳು ಮುಳುಗಡೆ ಆಗಿವೆ. ನೆರೆಯ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಕಳೆದ ಮೂವತ್ತು ವರ್ಷಗಳಲ್ಲಿಯೇ ಕಂಡುಕೇಳರಿಯದ ರೀತಿಯಲ್ಲಿ ದಾಖಲೆಯ ಮಳೆಯಾಗಿದೆ.
ಚೆನ್ನೈ, ತಿರುವಣ್ಣಮಲೈ, ಕೃಷ್ಣಗಿರಿ, ಕಲ್ಲಕುರಿಚ್ಚಿ, ವಿಲ್ಲುಪ್ಪುರಂ, ಕಡಲೂರು, ಕಾಂಚಿಪುರಂ, ವೆಲೂರಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಅತ್ತ ತಿರುವಣ್ಣಾಮಲೈನಲ್ಲಿ ಗುಡ್ಡ ಕುಸಿದು ಏಳು ಮಂದಿ ಕಣ್ಮರೆಯಾಗಿದ್ದಾರೆ. ಇತ್ತ ಕೃಷ್ಣಗಿರಿಯಲ್ಲಿ ಕೆರೆ ಕೋಡಿ ಒಡೆದು ಮನೆಗಳು ಜಲಾವೃತವಾಗಿದ್ದು ನಿಂತಿದ್ದ ವಾಹನಗಳು ನೀರುಪಾಲಾಗಿವೆ. ಪೊಲೀಸ್ ಠಾಣೆಯ ಮುಳುಗಿದೆ.
ಸದ್ಯ ತೀವ್ರ ವಾಯುಭಾರ ಕುಸಿತವಾಗಿ ಬದಲಾಗಿರುವ ಫೆಂಗಲ್ ತುಂಬಾ ನಿಧಾನವಾಗಿ ಪಶ್ಚಿಮ ದಿಕ್ಕಿನತ್ತ ಚಲಿಸುತ್ತಿದೆ. ಇಂದು ಮಧ್ಯರಾತ್ರಿಯವರೆಗೂ ಪುದುಚ್ಚೆರಿ, ಉತ್ತರ ತಮಿಳುನಾಡಿನಲ್ಲೇ ಕೇಂದ್ರೀಕೃತವಾಗಿ ಇರಲಿದೆ. ಮಳೆ ಸಂಬಂಧಿ ಅವಘಡಗಳಿಂದ ತಮಿಳುನಾಡು-ಪುದುಚ್ಚೆರಿಯಲ್ಲಿ ಈವರೆಗೂ ಕನಿಷ್ಠ 11 ಮಂದಿ ಬಲಿ ಆಗಿದ್ದಾರೆ.
ದುಚ್ಚೆರಿ ಜಲಮಯವಾಗಿದ್ದು ಮನೆಗಳ ಬಳಿ ಪ್ರವಾಹದಂತೆ ನೀರು ಹರಿಯುತ್ತಿದೆ. ತಿರುವಣ್ಣಾಮಲೈಯಲ್ಲಿ ಮನೆಗಳ ಮೇಲೆ ಬಂಡೆ ಉರುಳಿದರೆ ದೇವಸ್ಥಾನದ ಗೋಡೆಗಳು ಕುಸಿದಿವೆ. ಎರ್ಕಾಡ್ ಮುಖ್ಯರಸ್ತೆಯಲ್ಲಿ ಭೂಕುಸಿತವಾಗಿದೆ. ವಿಳ್ಳುಪುರಂ-ವೇಲೂರು ಹೆದ್ದಾರಿ ಮುಳುಗಡೆಯಾಗಿದೆ. ಬೋಟ್ ಮೂಲಕ ಸಂತ್ರಸ್ತರ ರಕ್ಷಣೆ ಮಾಡಲಾಗುತ್ತಿದೆ.