ಹೊಸದಿಗಂತ ವರದಿ,ಮಡಿಕೇರಿ:
ಸಂಚಾರಿ ನಿಯಮ ಉಲ್ಲಂಘನೆ ಹಾಗೂ ವಾಹನದಲ್ಲಿ ಮಾರ್ಪಾಡು ಮಾಡಿದ ಯುವಕನೊಬ್ಬನಿಗೆ ಮಡಿಕೇರಿ ಸಂಚಾರಿ ಪೊಲೀಸರು 25,500ರೂ.ಗಳ ದಂಡ ವಿಧಿಸಿದ ಘಟನೆ ನಡೆದಿದೆ.
ಮಡಿಕೇರಿ ನಗರದ ಮಹದೇವಪೇಟೆ ನಿವಾಸಿ ಅಬ್ದುಲ್ ಫಹೀಮ್ (21) ಎಂಬಾತನೇ ಈ ಭಾರೀ ಮೊತ್ತದ ದಂಡಕ್ಕೆ ಒಳಗಾದವನಾಗಿದ್ದಾನೆ.
ಮಡಿಕೇರಿ ಸಂಚಾರಿ ಠಾಣೆಯ ಪಿಎಸ್ಐ ಶ್ರೀಧರ್ ಹಾಗೂ ಸಿಬ್ಬಂದಿಗಳು ಭಾನುವಾರ, ನಗರದ ಕಾಲೇಜು ರಸ್ತೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ವಾಹನಗಳ ಪರಿಶೀಲನೆ ಕರ್ತವ್ಯದಲ್ಲಿರುವ ಸಂದರ್ಭ ಕೆಎ 09 ವಿ 9114 ಸಂಖ್ಯೆಯ ಸುಜುಕಿ ಸಮುರಾಯಿ ದ್ವಿಚಕ್ರ ವಾಹನವು ಅತೀವೇಗ ಹಾಗೂ ಕರ್ಕಶ ಧ್ವನಿ ಉಂಟು ಮಾಡುತ್ತಾ ಬರುತ್ತಿರುವುದನ್ನು ಗಮನಿಸಿ ವಾಹನವನ್ನು ತಡೆದು ಪರಿಶೀಲಿಸಿದ್ದಾರೆ.
ಈ ಸಂದರ್ಭ ವಾಹನದ ಸೈಲೆನ್ಸರ್’ನ್ನು ಮಾರ್ಪಾಡುಗೊಳಿಸಿರುವುದು, ಸೈಡ್ ಮಿರರ್, ಹಿಂಬದಿಯ ಇಂಡಿಕೇಟರ್ ಹಾಗೂ ಹೊಗೆ ತಪಾಸಣಾ ಪತ್ರ ಇಲ್ಲದಿರುವುದು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರ ಮಹದೇವಪೇಟೆ ನಿವಾಸಿಯಾದ ಅಬ್ದುಲ್ ಫಹೀಮ್ ವಿರುದ್ಧ ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಲಂ: 281, ಬಿಎನ್‌ಎಸ್ & 189, 177, 190(2) & 115 ಸಿಎಂವಿ ರೂಲ್ಸ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಲ್ಲದೆ ಆರೋಪಿಗೆ ಅತೀವೇಗ ಮತ್ತು ಅಜಾಗರೂಕತೆಯ ವಾಹನ ಚಾಲನೆಗಾಗಿ 10ಸಾವಿರ, ಸೈಲೆನ್ಸರ್ ಮಾರ್ಪಾಡುಗೊಳಿಸಿರುವುದು ಮತ್ತು ಹೊಗೆ ತಪಾಸಣೆ ಪತ್ರ ಇಲ್ಲದಿರುವುದಕ್ಕೆ ರೂ. 10 ಸಾವಿರ, ರೇಸಿಂಗ್ ಮತ್ತು ವೇಗದ ಪ್ರಯೋಗಕ್ಕಾಗಿ ರೂ. 5ಸಾವಿರ ಮತ್ತು ಸೈಡ್ ಮಿರರ್ ಮತ್ತು ಹಿಂಬದಿಯ ಇಂಡಿಕೇಟರ್ ಇಲ್ಲದಿರುವುದಕ್ಕೆ ರೂ. 500 ಸೇರಿದಂತೆ ಒಟ್ಟು 25,500 ರೂ. ದಂಡ ವಿಧಿಸಿದ್ದಾರೆ.
ವಾಹನ ಸವಾರರು ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ವಾಹನ ಮಾಲಕರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮತ್ತು ವಾಹನ ಪರವಾನಗಿ ಹೊಂದಿಲ್ಲದವರಿಗೆ ವಾಹನ ಚಲಾಯಿಸಲು ಆಸ್ಪದ ನೀಡಬಾರದು ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಲಾಯಿಸುವುದು ಕಂಡುಬಂದಲ್ಲಿ ವಾಹನ ಮಾಲಕರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮವಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಅತೀ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸುವುದು ಹಾಗೂ ದ್ವಿಚಕ್ರ ವಾಹನದ ಸೈಲೆನ್ಸರನ್ನು ಮಾರ್ಪಾಡುಗೊಳಿಸಿ ಕರ್ಕಶ ಶಬ್ಧವನ್ನು ಉಂಟು ಮಾಡುವ ವಾಹನಗಳು ಕಂಡುಬಂದಲ್ಲಿ ವಾಹನದ ನೋಂದಣಿ ಸಂಖ್ಯೆ ಅಥವಾ ವಾಹನ ಮಾಲಕರ/ಸವಾರರ ಮಾಹಿತಿ ನೀಡಬೇಕು. ಬೈಕ್ ಕಾರುಗಳನ್ನು ಚಲಾಯಿಸುತ್ತಾ ಯಾವುದೇ ರೀತಿಯ ಸ್ಟಂಟ್‌ಗಳನ್ನು ಮಾಡಿರುವ ಭಾವಚಿತ್ರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ (Facebook, Instagram, Twitter & etc.) ಹಂಚಿಕೊಂಡಿರುವ ಬಗ್ಗೆ, ರಸ್ತೆಯಲ್ಲಿ ಯಾವುದೇ ಅಪಘಾತ ಸಂಭವಿಸಿದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅಥವಾ ಪೊಲೀಸ್ ಕಂಟ್ರೋಲ್ ರೂಮ್ ಮೊಬೈಲ್ ಸಂಖ್ಯೆ: 9480804900 & ದೂರವಾಣಿ ಸಂಖ್ಯೆ: 08272 228330ಗೆ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.