ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗ್ಗೆ ತಿಂಡಿ ರೆಡಿ ಮಾಡೋದೇ ದೊಡ್ಡ ಸಮಸ್ಯೆ. ಒಂದು ಟೈಂ ಹೊಂದಾಣಿಕೆ ಆಗೋದಿಲ್ಲ. ಮತ್ತೊಂದು ಬೆಳಗ್ಗಿನ ಬ್ಯುಸಿ ಷೆಡ್ಯೂಲ್. ಹಾಗಾದ್ರೆ ಫಟಾಫಟ್ ರೆಡಿಯಾಗೋ ಈ ಪುಲಾವ್ ನಿಮಗೆ ಬೆಸ್ಟ್ ರೆಸಿಪಿಯಾಗುತ್ತದೆ. ರೈಸ್ ಪುಲಾವ್ ಎಲ್ಲರೂ ಮಾಡ್ತಾರೆ. ಆದ್ರೆ ಶ್ಯಾವಿಗೆಯ ಪುಲಾವ್ ಯಾವಾಗಾದ್ರೂ ಟೇಸ್ಟ್ ಮಾಡಿದ್ದೀರಾ… ಇಲ್ಲಲ್ವಾ…ಹಾಗಾದೆ ಶ್ಯಾವಿಗೆ ಪುಲಾವ್ ಮಾಡಿ ಟೇಸ್ಟ್ ಮಾಡಿ. ಒಮ್ಮೆ ತಿಂದ್ರೆ ಮತ್ತೆ ಮತ್ತೆ ತಿನ್ನಬೇಕೆನಿಸುವುದಂತೂ ಗ್ಯಾರಂಟಿ. ಹಾಗಾದ್ರೆ ಇವತ್ತು ಶ್ಯಾವಿಗೆ ಪಲಾವ್ ಮಾಡೋಣ..
ಉಪ್ಪಿಟ್ಟು ಅಥವಾ ಪಾಯಸಕ್ಕಾಗಿ ತಂದ ಶ್ಯಾವಿಗೆಯನ್ನು ಎರಡು ಕಪ್ ತೆಗೆದುಕೊಳ್ಳಿ. ಒಲೆಯ ಮೇಲೆ ಬಾಣಲೆಯಿಟ್ಟು ನಾಲ್ಕು ಟೀ ಸ್ಪೂನ್ ತೆಂಗಿನೆಣ್ಣೆ ಹಾಕಿ. ಸಣ್ಣ ಉರಿಯಲ್ಲಿ ಶ್ಯಾವಿಗೆ ಹುರಿದುಕೊಳ್ಳಿ. ಕಂದು ಬಣ್ಣಕ್ಕೆ ತಿರುಗಿದ ಶ್ಯಾವಿಗೆಯನ್ನು ಪ್ರತ್ಯೇಕ ತಟ್ಟೆಗೆ ಹಾಕಿಟ್ಟುಕೊಳ್ಳಿ.
ಅದೇ ಬಿಸಿಯಾಗಿರುವ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ. ತುಪ್ಪ ಕರಗಿದ ನಂತರ ಜೀರಿಗೆ, ಕರಿಬೇವಿನೆಲೆ, ಲವಂಗ, ಏಲಕ್ಕಿ ಸೇರಿಸಿ ಪರಿಮಳ ಬರುವ ತನಕ ಹುರಿಯಿರಿ. ಪಲಾವ್ ಮಾಡಲು ಬೇಕಾಗಿರುವ ಬೀನ್ಸ್, ಕ್ಯಾರೆಟ್, ಹಸಿರು ಬಟಾಣಿ ಹಾಗೂ ಈರುಳ್ಳಿ ಸೇರಿಸಿ ಫ್ರೈಮಾಡಿ. ರುಚಿಗೆ ಬೇಕಾದಷ್ಟ ಉಪ್ಪು ಸೇರಿಸಿ. ಸ್ವಲ್ಪ ಅರಶಿನಹುಡಿ, ಮೆಣಸಿನ ಹುಡಿ, ಗರಂ ಮಸಾಲ ಸೇರಿಸಿ ಹುರಿಯಿರಿ. ಒಂದೂವರೆ ಕಪ್ ನೀರು ಸೇರಿಸಿ ಸರಿಯಾಗಿ ಕುದಿಸಿಕೊಳ್ಳಿ. ಕೊನೆಯಲ್ಲಿ ಹುರಿದಿಟ್ಟುಕೊಂಡ ಶ್ಯಾವಿಗೆಯನ್ನು ಸೇರಿಸಿ ಬೇಯಿಸಿ. ತಳಹಿಡಿಯದಂತೆ ಗಮನಿಸಿಕೊಳ್ಳಿ. ಸರಿಯಾಗಿ ಬೆಂದ ನಂತರ ಬಿಸಿ ಬಿಸಿ ಶ್ಯಾವಿಗೆ ಪುಲಾವ್ ಸರ್ವ್ ಮಾಡಿ.