ಬಿಜೆಪಿಯತ್ತ ಜನರ ಒಲವನ್ನು ಸ್ಥಳೀಯ ಸಂಸ್ಥೆಗಳ ಗೆಲುವು ಸಾಬೀತುಪಡಿಸಿದೆ: ನಿರ್ಮಲ್ ಕುಮಾರ್ ಸುರಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌, ಬೆಂಗಳೂರು:
ವಿಜಯಪುರ ಮತ್ತು ಕೊಳ್ಳೇಗಾಲದ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿಯ ಗೆಲುವು ಪಕ್ಷದ ಪರ ಜನರು ತೋರಿಸುತ್ತಿರುವ ಒಲವನ್ನು ಸಂಕೇತಿಸುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ ಅಭಿಪ್ರಾಯಪಟ್ಟಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ʼಜಗನ್ನಾಥ ಭವನʼದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆಗಳ ಫಲಿತಾಂಶ ಮತ್ತು ಕಲ್ಬುರ್ಗಿಯ ಸಮಾವೇಶದಲ್ಲಿ ಸೇರಿದ ಜನರ ಸಂಖ್ಯೆಯು ಭಾರತ್ ಜೋಡೋ ಯಾತ್ರೆಗೆ ತಕ್ಕ ಉತ್ತರ ಕೊಟ್ಟಿದೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಜಯಪುರ ನಗರ ಪಾಲಿಕೆ ಫಲಿತಾಂಶ ಹೊರಬಿದ್ದಿದೆ. ವಿಜಯಪುರ ಪಾಲಿಕೆಯಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ ಎಂದು ವಿಶ್ಲೇಷಿಸಲಾಗುತ್ತಿತ್ತು. ಆದರೆ, ನಾವು ಬಹಳ ಸರಳ ಮತ್ತು ಸುಲಭವಾಗಿ ಗೆದ್ದಿದ್ದೇವೆ. ಒಟ್ಟು 35 ಸೀಟುಗಳಲ್ಲಿ 17 ಸೀಟನ್ನು ಬಿಜೆಪಿ ಗೆದ್ದಿದೆ ಎಂದು ತಿಳಿಸಿದರು. ಸರಳ ಬಹುಮತ ಲಭಿಸಿದ್ದು, ಇಲ್ಲಿ ಈ ಹಿಂದೆ ಬಿಜೆಪಿ ಗೆದ್ದಿರಲಿಲ್ಲ ಎಂದರು. ಇದೊಂದು ಐತಿಹಾಸಿಕ ಗೆಲುವು ಎಂದು ಬಣ್ಣಿಸಿದರು.
ವಿಜಯಪುರದಲ್ಲಿ ನಾಳೆ ದೊಡ್ಡ ಪ್ರಮಾಣದ ಸಂಭ್ರಮಾಚರಣೆ ನಡೆಯಲಿದೆ. ಕಾರ್ಯಕರ್ತರು ಮತ್ತು ಪ್ರಮುಖರು ಈ ಕುರಿತು ಯೋಜಿಸಿದ್ದಾರೆ. ಕೊಳ್ಳೇಗಾಲದ ನಗರಸಭೆಯ 7 ಸೀಟುಗಳಿಗೆ ಉಪ ಚುನಾವಣೆ ನಡೆದಿದ್ದು, 6 ಸೀಟುಗಳನ್ನು ಬಿಜೆಪಿ ಗೆದ್ದಿದೆ. ಇದು ಬಿಜೆಪಿ ಪರ ವಾತಾವರಣದ ಸಂಕೇತ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ ಪಕ್ಷವು ವಿಜಯಪುರದಲ್ಲಿ ಬಹಳ ಪ್ರಯತ್ನ ಪಟ್ಟರೂ ಕೇವಲ 10 ಸೀಟುಗಳನ್ನು ಗೆದ್ದಿದೆ. ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರನ್ನು ಓಲೈಸುವ ಪಕ್ಷವಾಗಿ ಮುಂದುವರಿದಿದೆ. 10 ಸೀಟುಗಳಲ್ಲಿ 7 ಜನ ಮುಸ್ಲಿಮರು ಗೆದ್ದಿದ್ದಾರೆ. 35 ಸೀಟುಗಳಲ್ಲಿ 17 ಮುಸ್ಲಿಮರಿಗೆ ಅವರು ಟಿಕೆಟ್ ಕೊಟ್ಟಿದ್ದರು. ತುಷ್ಟೀಕರಣದ ಕಾಂಗ್ರೆಸ್ ಪಕ್ಷದ ಹಳೆಯ ನೀತಿಯನ್ನು ಅದು ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬೆಳಗಾವಿ ಚುನಾವಣೆಯಲ್ಲಿ ಕಾಂಗ್ರೆಸ್ 15 ಸೀಟು ಗೆದ್ದಿದ್ದರೆ ಅದರಲ್ಲಿ 9 ಜನ ಮುಸ್ಲಿಮರಿದ್ದರು. ಗುಲ್ಬರ್ಗದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ 27 ಸೀಟುಗಳಲ್ಲಿ 18 ಜನ ಮುಸ್ಲಿಮರು ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಮುಸ್ಲಿಂ ಲೀಗ್ ಆಗುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.
ನವೆಂಬರ್ 20ರಂದು ಬಳ್ಳಾರಿಯಲ್ಲಿ ಎಸ್‍ಟಿ ಸಮಾವೇಶ ನಡೆಯಲಿದ್ದು, ಅಲ್ಲಿ 8ರಿಂದ 10 ಲಕ್ಷ ಜನರು ಭಾಗವಹಿಸಲಿದ್ದಾರೆ. ಕೇಂದ್ರದ ಪ್ರಮುಖ ನಾಯಕರನ್ನು ಆಹ್ವಾನಿಸಿದ್ದು, ಎರಡರಿಂದ ಮೂರು ದಿನಗಳಲ್ಲಿ ಸ್ಪಷ್ಟತೆ ಲಭಿಸಲಿದೆ ಎಂದರು. ದೀರ್ಘ ಕಾಲದಿಂದ ಬಾಕಿ ಇದ್ದ ಮೀಸಲಾತಿ ಹೆಚ್ಚಳದ ಬಳಿಕ ಎಸ್‍ಟಿ ಸಮುದಾಯದಲ್ಲಿ ಹೆಚ್ಚಿನ ಉತ್ಸಾಹ ಇದೆ. ಪ್ರಮುಖರ ಭೇಟಿ ವೇಳೆ ಹೆಚ್ಚಿನ ಪ್ರತಿಕ್ರಿಯೆ ಮತ್ತು ಉತ್ಸಾಹವೂ ವ್ಯಕ್ತವಾಗಿದೆ ಎಂದು ವಿವರಿಸಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯದ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!