ನಾನು ಡಿ.ಕೆ. ಸುರೇಶ್‌ ಪತ್ನಿ, ನನಗೂ ರಾಯಲ್‌ ಸ್ಟೇಟಸ್‌ ಬೇಕು ಎಂದ ಮಹಿಳೆ ವಿಡಿಯೋ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಪತ್ನಿ, ನನಗೂ ಸಮಾಜದಲ್ಲಿ ಹೈ ಸ್ಟೇಟಸ್‌ ಬೇಕು ಎಂದು ಹೇಳಿಕೊಂಡು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಟ್ಟಿದ್ದಾರೆ.

ನಾನು ಮೊದಲು ಡಿ.ಕೆ. ಸುರೇಶ್ ಅವರ ಹೆಂಡತಿಯಾಗಿ ಹೇಳಬೇಕೆಂದರೆ, ನಾನು ಫಸ್ಟ್ ಸುರೇಶ್ ಅಭಿಮಾನಿ. ಯಾಕೆಂದರೆ ಮೂರು ಸಲ ಎಂ.ಪಿ.ಯಾಗಿ ಯಾರೂ ಮಾಡಲಿಕ್ಕಾಗದ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇಂತಹವರನ್ನು ನನ್ನ ಗಂಡ ಎಂದು ಹೇಳಿಕೊಳ್ಳಲು ಖುಷಿಪಡುತ್ತೇನೆ ಎಂದು ಆಕೆ ವಿಡಿಯೊದಲ್ಲಿ ಹೇಳಿದ್ದಾರೆ. ನಾನು ಹಲವು ಸಭೆ ಸಮಾರಂಭಗಳಿಗೆ ಹೋಗುತ್ತಿರುತ್ತೇನೆ.

ಆದರೆ ಸರಳವಾಗಿ ಹೋಗುವುದರಿಂದ ಎಲ್ಲರೂ ನನ್ನ ಪ್ರಶ್ನೆ ಮಾಡುತ್ತಾರೆ, ನೀವು ಡಿ.ಕೆ ಸುರೇಶ್ ಪತ್ನಿ ಅಲ್ಲವೇ, ಏಕೆ ಇಷ್ಟೊಂದು ಸಿಂಪಲ್ ಆಗಿ ಬಂದಿದ್ದೀರಾ ಎಂದು ಕೇಳುತ್ತಾರೆ, ಜನರಿಗೆ ಸ್ಟೇಟಸ್ ಬೇಕು, ಹಾಗಾಗಿ ನಾನು ರಾಯಲ್ ಆಗಿ ಇರಲು ಬಯಸುತ್ತೇನೆ ಎಂದು ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಹರಿ ಬಿಟ್ಟಿದ್ದಾರೆ. ಫೇಸ್‌ಬುಕ್‌ನಲ್ಲಿ PavitraDksuresh Dodalahalli ಎಂಬ ಹೆಸರಿನಲ್ಲಿ ಖಾತೆ ಹೊಂದಿರುವ ಮಹಿಳೆ, ಏ.8ರಂದು ವಿಡಿಯೊ ಪೋಸ್ಟ್ ಮಾಡಿದ್ದಾರೆ.

ಡಿ.ಕೆ. ಸುರೇಶ್ ಪರ ವಕೀಲ ಪ್ರದೀಪ್ ಎಂಬುವರು ರಾಮನಗರದ ಸಿಇಎನ್ ಪೊಲೀಸ್ ಠಾಣೆಗೆ ಮಹಿಳೆ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಸುರೇಶ್ ಅವರ ಪತ್ನಿ ಎಂದು ದುರುದ್ದೇಶದಿಂದ ಹೇಳಿಕೊಂಡು ಅಪಪ್ರಚಾರ ನಡೆಸುತ್ತಿರುವ ಮಹಿಳೆ, ಸಾರ್ವಜನಿಕವಾಗಿ ತಪ್ಪು ಸಂದೇಶ ಹರಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಚಿಹ್ನೆ ಸಹ ದುರುಪಯೋಗಪಡಿಸಿ ಕೊಂಡಿದ್ದಾರೆ. ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ವಕೀಲ ಪ್ರದೀಪ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!