ಹೊಸದಿಗಂತ ಡಿಜಿಟಲ್ ಡೆಸ್ಕ್:
‘ವಿದ್ಯಾಸಿರಿ’ ಮೊತ್ತವನ್ನು ಪ್ರತಿ ವಿದ್ಯಾರ್ಥಿಗೆ ₹1,500ರಿಂದ ₹2,000ಕ್ಕೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ.
ಮಡಿವಾಳ ಮತ್ತು ಹಿಂದುಳಿದ ಸಮುದಾಯದ ಮಕ್ಕಳು ಹೆಚ್ಚು ಶಿಕ್ಷಿತರಾಗಬೇಕು. ಮಡಿವಾಳ ಸಮುದಾಯ ಮುಖ್ಯವಾಹಿನಿಗೆ ಬರಬೇಕು. ಅದಕ್ಕಾಗಿ ವಿದ್ಯಾಸಿರಿ ಮೊತ್ತವನ್ನು ಹೆಚ್ಚಿಸಲು ತೀರ್ಮಾನಿಸಿದ್ದೇವೆ. ಮಡಿವಾಳ ಸೇರಿ ಎಲ್ಲ ಹಿಂದುಳಿದ ಸಮುದಾಯಗಳ ಪ್ರಗತಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದರು.
ಮಡಿವಾಳ ಸಮಾಜದಲ್ಲಿ ಒಬ್ಬರೂ ಶಾಸಕರಿಲ್ಲ. ಒಬ್ಬರು ಮಾತ್ರ ಐಎಎಸ್ ಅಧಿಕಾರಿ ಇದ್ದಾರೆ. ಮಡಿವಾಳ ಸಮಾಜ ಇಷ್ಟು ಹಿಂದುಳಿಯಲು ಮನುಸ್ಮೃತಿ ಕಾರಣ. ಸಮಾನತೆ ಸಾರುವ ಸಂವಿಧಾನವನ್ನು ವಿರೋಧಿಸುವವರನ್ನು ದೂರ ಇಡಬೇಕು. ಅವರನ್ನು ಹತ್ತಿರಕ್ಕೆ ಸೇರಿಸಬೇಡಿ. ಸಂವಿಧಾನ ವಿರೋಧಿಗಳ ಜತೆ ಕೈ ಜೋಡಿಸುವುದು ಮಡಿವಾಳ ಮಾಚಿದೇವರಿಗೆ ಮಾಡುವ ಅವಮಾನ ಎಂದು ಕಿಡಿಕಾರಿದರು.