ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಯಕ ವಿಜಯ್ ಆಂಟೋನಿ ಪುತ್ರಿ ಲಾರಾ ಆತ್ಮಹತ್ಯೆ ಅವರ ಕುಟುಂಬದಲ್ಲಿ ತುಂಬಲಾರದ ನಷ್ಟವನ್ನು ತಂದೊಡ್ಡಿದೆ. ಮಗಳ ಸಾವಿನ ಕುರಿತು ಮೊದಲ ಬಾರಿಗೆ ವಿಜಯ್ ಪ್ರತಿಕ್ರಿಯಿಸಿದ್ದು, ʻಮಗಳ ಜೊತೆಯಲ್ಲಿ ತಾನೂ ಸತ್ತೆʼ ಎಂದು ಭಾವುಕರಾದರು. ಇನ್ನು ಮುಂದೆ ಮಾಡುವ ಪ್ರತಿಯೊಂದು ಒಳ್ಳೆಯ ಕಾರ್ಯಕ್ಕೂ ಮಗಳ ಹೆಸರಿಡಲಾಗುವುದು. ಅವಳೊಂದಿಗೆ ಒಟ್ಟಿಗೆ ಇದ್ದಂತೆ ಇರುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
“ನನ್ನ ಮಗಳು ತುಂಬಾ ಕರುಣಾಮಯಿ, ಧೈರ್ಯಶಾಲಿ. ಜಾತಿ, ಧರ್ಮ, ಹಣ, ಹೊಟ್ಟೆಕಿಚ್ಚು, ಸಂಕಟ, ಬಡತನ, ದುಶ್ಚಟ, ದ್ವೇಷದ ವಾತಾವರಣ ಇಲ್ಲದ ಶಾಂತಿಯುತವಾದ ಜಾಗಕ್ಕೆ ಹೋಗಿದ್ದಾಳೆ. ಆದರೂ ಅವಳು ನನ್ನೊಂದಿಗೆ ಮಾತನಾಡುತ್ತಿರುವಂತೆ ತೋರುತ್ತಿದೆ. ಅವಳೊಂದಿಗೆಯೇ ನನ್ನ ಪ್ರಾಣವೂ ಹೋಗಿದೆ. ಇನ್ನು ಮುಂದೆ ನಾನು ಮಾಡುವ ಪ್ರತಿಯೊಂದು ಒಳ್ಳೆಯ ಕಾರ್ಯವನ್ನು ಅವಳ ಹೆಸರಿನಿಂದ ಪ್ರಾರಂಭಿಸುತ್ತೇನೆ ಎಂದು ಟ್ವಿಟ್ಟರ್‌ನಲ್ಲಿ ಪತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.
ವಿಜಯ್ ಆಂಟನಿ ಅವರ ಹಿರಿಯ ಮಗಳು ಮೀರಾ (16) ಮಂಗಳವಾರ ಚೆನ್ನೈನ ನಿವಾಸದ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಳಗಿನ ಜಾವ ಮೂರು ಗಂಟೆಗೆ ಆಕೆ ನೇಣು ಬಿಗಿದುಕೊಂಡಿರುವುದನ್ನು ಗಮನಿಸಿದ ಕುಟುಂಬಸ್ಥರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದರು. ಮಗಳ ಸಾವಿನಿಂದಾಗಿ ವಿಜಯ್ ಆಂಟೋನಿ ಕುಟುಂಬ ದುಃಖದಲ್ಲಿದೆ. ಬುಧವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.