May 13, 2026
Wednesday, May 13, 2026
spot_img

ವಿಶ್ವಾಸಮತಕ್ಕೂ ಮುನ್ನವೇ ಎಚ್ಚೆತ್ತ ವಿಜಯ್: ವಿವಾದಾತ್ಮಕ ಓಎಸ್‌ಡಿ ನೇಮಕಾತಿ ಆದೇಶ ವಾಪಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಜ್ಯೋತಿಷಿಯೊಬ್ಬರ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿಜಯ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಕ ಮಾಡಿದ್ದ ಆದೇಶವನ್ನು ಸಿಎಂ ವಿಜಯ್ ಇಂದು ಅಧಿಕೃತವಾಗಿ ಹಿಂಪಡೆದಿದ್ದಾರೆ.

ಮೇ 12ರಂದು ಸಿಎಂ ವಿಜಯ್ ಅವರು ವೆಟ್ರಿವೇಲ್ ಅವರನ್ನು ತಮ್ಮ ವಿಶೇಷ ಅಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದರು. ಈ ನಿರ್ಧಾರವು ಸರ್ಕಾರಕ್ಕೆ ಬೆಂಬಲ ನೀಡಿದ್ದ ಮಿತ್ರಪಕ್ಷಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿತ್ತು. ವಿಶೇಷವಾಗಿ ವೈಜ್ಞಾನಿಕ ಮನೋಭಾವದ ಪರವಿರುವ ಪಕ್ಷಗಳು, ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಜ್ಯೋತಿಷಿಗಳಿಗೆ ಅಧಿಕೃತ ಸ್ಥಾನ ನೀಡುವುದನ್ನು ಕಟುವಾಗಿ ಟೀಕಿಸಿದ್ದವು.

ತಮಿಳಗ ವೆಟ್ರಿ ಕಳಗಂ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡಿದ್ದ ವಿಸಿಕೆ ಪಕ್ಷದ ಶಾಸಕ ವನ್ನಿ ಅರಸು ಅವರು ವಿಧಾನಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದರು. “ನಮ್ಮ ಸರ್ಕಾರವು ಮೂಢನಂಬಿಕೆಗಳಿಗಿಂತ ವೈಜ್ಞಾನಿಕ ಚಿಂತನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರಿ ವ್ಯವಸ್ಥೆಯಲ್ಲಿ ಜ್ಯೋತಿಷಿಗಳಿಗೆ ಸಲಹಾ ಹುದ್ದೆ ನೀಡುವುದು ಸರಿಯಲ್ಲ” ಎಂದು ಅವರು ಪ್ರತಿಪಾದಿಸಿದ್ದರು.

ರಾಜ್ಯ ರಾಜಕೀಯದ ಅನಿಶ್ಚಿತತೆಯ ನಡುವೆ ಸರ್ಕಾರ ರಚಿಸಿರುವ ವಿಜಯ್ ಅವರಿಗೆ ಮಿತ್ರಪಕ್ಷಗಳ ವಿಶ್ವಾಸ ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ, ವಿಶ್ವಾಸಮತ ಯಾಚನೆಗೆ ಮುನ್ನವೇ ವಿವಾದಾತ್ಮಕ ನೇಮಕಾತಿಯನ್ನು ಮರುಪರಿಶೀಲಿಸುವುದಾಗಿ ತಿಳಿಸಿದ್ದ ಸಿಎಂ, ಇದೀಗ ಆದೇಶವನ್ನು ರದ್ದುಗೊಳಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಈ ಬೆಳವಣಿಗೆಯು ವಿಜಯ್ ನೇತೃತ್ವದ ಸರ್ಕಾರವು ಮಿತ್ರಪಕ್ಷಗಳ ಅಭಿಪ್ರಾಯಕ್ಕೆ ಗೌರವ ನೀಡುತ್ತಿದೆ ಎಂಬ ಸಂದೇಶವನ್ನು ರವಾನಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !