ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರ ವಕ್ಫ್ ಆಸ್ತಿ ನೋಂದಣಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು ಇಂದು ಬಿಜೆಪಿ ನಿಯೋಗ ವಿಜಯಪುರಕ್ಕೆ ಭೇಟಿ ನೀಡಿ ರೈತರ ಅಹವಾಲು ಸ್ವೀಕರಿಸಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಭೂಬಾಲನ್ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯಪುರ ಜಿಲ್ಲಾಧಿಕಾರಿ ಭೂಬಾಲನ್ ಅವರು, ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಒತ್ತುವರಿ ಜಾಗ ತೆರವುಗೊಳಿಸುವಂತೆ ಹೇಳಿದ್ದರು. ಸಚಿವರ ಸೂಚನೆ ಮೇರೆಗೆ ಒತ್ತುವರಿ ತೆರವು ಮಾಡಿದ್ದೇವೆ. ಇಂದೀಕರಣ ಅಂದರೆ ಗಣಕೀಕರಣ ಸತತವಾಗಿ ನಡೆಯುತ್ತೆ. ಪ್ರತಿ ವರ್ಷವೂ ಗಣಕೀಕರಣ ಆಗಿವೆ. ನೋಟಿಸ್ ಕೊಡದೆಯೂ ಇಂದೀಕರಣ ಆದ ಉದಾಹರಣೆ ಇವೆ ಎಂದು ಸ್ಪಷ್ಟಪಡಿಸಿದರು.
ಭೂ ಮಾಲೀಕರು ಹಾಗೂ ವಕ್ಫ್ಗೆ ನಾವು ನೊಟೀಸ್ ಕೊಟ್ಟಿದ್ದೇವೆ. ನೋಟಿಸ್ ಕೊಟ್ಟ ತಕ್ಷಣ ಖಾತಾ ಬದಲಾವಣೆ ಆಗುವುದಿಲ್ಲ. ಇಬ್ಬರನ್ನೂ ಕರೆದು ವಿಚಾರಣೆ ನಡೆಸುತ್ತೇವೆ. ಕಾಲಂ ನಂ.9ರಲ್ಲಿ ಹಾಗೂ ಮಾಲೀಕತ್ವ ಜಾಗದಲ್ಲಿ ವಕ್ಫ್ ಹೆಸರು ಹಾಕಿಲ್ಲ. 44 ಆಸ್ತಿಗಳಿಗೆ ನೋಟಿಸ್ ಕೊಡದೆ ಇಂದೀಕರಣ ಮಾಡಿದ್ದೇವೆ. ಆದರೆ ಅವರ ಮಾಲೀಕತ್ವ ಬದಲಾಗಲ್ಲ. ಇಂಡಿ ತಹಶೀಲ್ದಾರ್ 41 ಖಾತೆಗಳಿಗೆ ನೋಟಿಸ್ ಕೊಡದೆ ಗಣಕೀಕರಣ ಮಾಡಿದ್ದಾರೆ. ಅದೆಲ್ಲವನ್ನು ಕ್ಯಾನ್ಸಲ್ ಮಾಡಿದ್ದೇವೆ. ನಾಳೆ ಪಹಣಿಯಿಂದ ವಕ್ಫ್ ಹೆಸರು ಹೋಗಲಿದೆ ಎಂದರು.
ವಕ್ಫ್ ಸಚಿವರು ಭವಿಷ್ಯದಲ್ಲಿ ಇಂತಹ ಸಮಸ್ಯೆ ಆಗಬಾರದೆಂದು ಟಾಸ್ಕ್ಫೋರ್ಸ್ ರಚನೆ ಮಾಡಿದ್ದಾರೆ. 250 ಎಕರೆ ಭೂಮಿಗೆ ನೋಟಿಸ್ ಕೊಡಲಾಗಿದೆ. ಈಗಾಗಲೇ ಕೊಟ್ಟಿರುವ ನೋಟಿಸ್ಗಳನ್ನು ವಾಪಸ್ ಪಡೆಯುತ್ತೇವೆ. ಎರಡು ಮೂರು ವರ್ಷಗಳ ಹಾಗೂ ಅದಕ್ಕೂ ಮುಂಚೆ ಆದ ಇಂದೀಕರಣ ಪ್ರಕರಣಗಳ ಕುರಿತು ಸರ್ಕಾರ ನೀಡುವ ಸೂಚನೆ ಪಾಲನೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಭೂಬಾಲನ್ ತಿಳಿಸಿದರು.