ಹೊಸದಿಗಂತ ವರದಿ,ಮಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈಜ ವಿಚಾರವನ್ನು ಮುಚ್ಚಿಹಾಕಲು 150 ಕೋಟಿ ರೂ. ಆಫರ್ ವಿಷಯವನ್ನು ಹೇಳತೊಡಗಿದ್ದಾರೆ. ಇದರ ಬದಲು ಸಿದ್ದರಾಮಯ್ಯ ಅವರಿಗೆ ಅಲ್ಪಸಂಖ್ಯಾತರ ಮೇಲೆ ಕಾಳಜಿ ಇದ್ದರೆ ನನ್ನ ವರದಿಯನ್ನು ಸಿಬಿಐಗೆ ಹಸ್ತಾಂತರ ಮಾಡಲಿ ಎಂದು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 7 ಸಾವಿರ ಪುಟಗಳ ವರದಿ ನೀಡಿದ್ದೆ. ಸಿಬಿಐ ತನಿಖೆ ಮಾಡಿದರೆ ಸಾವಿರಾರು ಪುಟಗಳಿಗೆ ವಿಸ್ತರಿಸಲಿದೆ. ಅಷ್ಟೊಂದು ಅಕ್ರಮಗಳು ನಡೆದಿವೆ. ರಾಜ್ಯದಲ್ಲಿ ಒಟ್ಟು 54 ಸಾವಿರ ಎಕರೆ ವಕ್ಪ್ ಆಸ್ತಿಯಲ್ಲಿ 27 ಸಾವಿರ ಎಕರೆಯಷ್ಟು ಒತ್ತುವರಿ ಆಗಿದೆ ಎಂದರು.
ವಕ್ಪ್ ಆಸ್ತಿ ಕಬಳಿಕೆ ಕುರಿತು ಮೌನ ವಹಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ 150 ಕೋಟಿ ರೂ. ಆಫರ್ ನೀಡಿಲ್ಲ. ಈ ವಿಚಾರ ಸತ್ಯಕ್ಕೆ ದೂರವಾದುದು. ವಕ್ಪ್ ಹೋರಾಟ ವಿಚಾರದಲ್ಲಿ ಸುಮ್ಮನಿರಿ, ಬಹಳ ಕಷ್ಟಪಟ್ಟಿದ್ದೀರಿ ಎಂದು ಬಿಜೆಪಿ ಅಧ್ಯಕ್ಷರು ಹೇಳಿದ್ಗರು. ಈ ವಿಚಾರಕ್ಕೆ ನನ್ನ ಹಾಗೂ ವಿಜಯೇಂದ್ರ ನಡುವೆ ವಾಕ್ಸಮರ ಏರ್ಪಟ್ಟಿತ್ತು ಎಂದರು.
ವಕ್ ಆಸ್ತಿ ಅಕ್ರಮದ ವರದಿಯನ್ನು ಮಂಡನೆ ಮಾಡದಂತೆ ಕಾಂಗ್ರೆಸ್‌ನವರು ಮಾತ್ರವಲ್ಲ, ಬಿಜೆಪಿಯವರೂ ಅಡ್ಡಗಾಲು ಹಾಕಿರಬಹುದು ಎಂದ ಮಾಣಿಪ್ಪಾಡಿ, ವರದಿ ಸಲ್ಲಿಕೆ ಬಳಿಕ ಕಾಂಗ್ರೆಸ್‌ನ ಅನೇಕರು ಆಫರ್ ಮಾಡಿದ್ದರು ಎಂದು ಆರೋಪಿಸಿದರು.