Friday, September 22, 2023

Latest Posts

ಭೂಮಿಗೆ ಚಂದ್ರನ ಅತ್ಯಂತ ಸನಿಹದ ಚಿತ್ರ ಕಳುಹಿಸಿದ ವಿಕ್ರಮ್‌ ಲ್ಯಾಂಡರ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಚಂದ್ರಯಾನ-3 ಯೋಜನೆ ತನ್ನ ಅಂತಿಮ ಘಟ್ಟದತ್ತ ಹೆಜ್ಜೆ ಇಡುತ್ತಿದ್ದು, ಪ್ರಪಲ್ಶನ್‌ ಮಾಡ್ಯುಲ್‌ನಿಂದ ವಿಕ್ರಮ್‌ ಲ್ಯಾಂಡರ್‌ ಬೇರ್ಪಟ್ಟಿರುವ ಚಿತ್ರಗಳನ್ನು ಹಾಗೂ ಚಂದ್ರನ ಅತ್ಯಂತ ಸನಿಹದ ಚಿತ್ರಗಳನ್ನು ವಿಕ್ರಮ್‌ ಲ್ಯಾಂಡರ್‌ ಭೂಮಿಗೆ ಕಳುಹಿಸಿಕೊಟ್ಟಿದೆ.

31 ಸೆಕೆಂಡ್ನ ವಿಡಿಯೋವನ್ನು ಇಸ್ರೋ ಶುಕ್ರವಾರ ಬಿಡುಗಡೆ ಮಾಡಿದ್ದು, ಚಂದ್ರಯಾನ-3 ನೌಕೆಯ ವಿಕ್ರಮಲ್‌ ಲ್ಯಾಂಡರ್‌ನಲ್ಲಿ ಅಳವಡಿಸಲಾಗಿರುವ ಇಮೇಜರ್‌ (ಎಲ್‌1) ಕ್ಯಾಮೆರಾ-1ರಿಂದ ಸೆರೆಹಿಡಿದ ಚಿತ್ರಗಳು ಇದಾಗಿವೆ ಎಂದು ತಿಳಿಸಿದೆ.

ಆಗಸ್ಟ್‌ 17 ರಂದು ಚಂದ್ರನ ಕಕ್ಷೆಯಲ್ಲಿ ಪ್ರಪಲ್ಶನ್‌ ಮಾಡ್ಯೂಲ್‌ ಹಾಗೂ ವಿಕ್ರಮ್‌ ಲ್ಯಾಂಡರ್‌ ಬೇರ್ಪಟ್ಟ ತಕ್ಷಣದಲ್ಲಿ ತೆಗೆದ ಚಿತ್ರಗಳು ಇದಾಗಿವೆ ಎಂದು ಮಾಹಿತಿ ನೀಡಿದೆ. ಇದಕ್ಕೂ ಮುನ್ನ ಆಗಸ್ಟ್‌ 15 ರಂದು ಲ್ಯಾಂಡರ್‌ ಪೊಸಿಷನ್‌ ಡಿಟೆಕ್ಟರ್ ಕ್ಯಾಮೆರಾದಿಂದ ಚಂದ್ರನ ಚಿತ್ರಗಳನ್ನು ಸೆರೆಹಿಡಿಯಲಾಗಿತ್ತು.

ಪ್ರಪಲ್ಶನ್‌ ಮಾಡ್ಯುಲ್‌ನಿಂದ ಬೇರ್ಪಟ್ಟಿರುವ ಚಂದ್ರಯಾನ-3ಯ ವಿಕ್ರಮ್‌ ಲ್ಯಾಂಡರ್‌ಅನ್ನು ಈಗ ಚಂದ್ರನ ಮೇಲೆ ಇಳಿಸುವ ಕೆಲಸ ನಡೆಯಲಿದೆ. ಇದಕ್ಕಾಗಿ ಶುಕ್ರವಾರ ಸಂಜೆ 4 ಗಂಟೆಗೆ ವಿಕ್ರಮ್‌ ಲ್ಯಾಂಡರ್‌ಅನ್ನು ಡಿಬೂಸ್ಟ್‌ ಮಾಡುವ ಪ್ರಕ್ರಿಯೆ ನಡೆಯಲಿದೆ. ಡಿಬೂಸ್ಟ್‌ ಎಂದರೆ, ಲ್ಯಾಂಡರ್‌ಅನ್ನು ಚಂದ್ರನ ಕಕ್ಷೆಯಲ್ಲಿ ನಿಧಾನಗೊಳಿಸುವ ಪ್ರಕ್ರಿಯೆ.

ಆಗಸ್ಟ್‌ 23 ರಂದು ಚಂದ್ರನ ಮೇಲೆ ಲ್ಯಾಂಡರ್‌ ಇಳಿಯುವ ಮುನ್ನ ಸಾಕಷ್ಟು ಬಾರಿ ಡಿಬೂಸ್ಟ್‌ ಪ್ರಕ್ರಿಯೆ ನಡೆಯಲಿದೆ.ವಿಕ್ರಮ್‌ ಲ್ಯಾಂಡರ್‌ನ ಪೆರಿಲುನ್ (ಚಂದ್ರನ ಅತ್ಯಂತ ಸನಿಹದ ಪಾಯಿಂಟ್‌) 30 ಕಿಲೋಮೀಟರ್‌ ಆಗಿರಲಿದ್ದರೆ, ಅಪೋಲುನ್ (ಚಂದ್ರನ ಗರಿಷ್ಠ ದೂರದ ಪಾಯಿಂಟ್‌) 100 ಕಿಲೋಮೀಟರ್‌ ಆಗಿರಲಿದೆ. ಈ ಕಕ್ಷೆಯಿಂದ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಸಾಫ್ಟ್‌ ಲ್ಯಾಂಡಿಂಗ್‌ ಮಾಡುವ ಪ್ರಕ್ರಿಯೆ ಆಗಸ್ಟ್‌ 23 ರಂದು ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!