ಹುಲಿ ಬಂತು ಹುಲಿ : ಗಾಳಿ ಸುದ್ದಿಗೆ ಆತಂಕಕ್ಕೊಳಗಾದ ಗ್ರಾಮಸ್ಥರು!

ಹೊಸದಿಗಂತ ವರದಿ ಮಡಿಕೇರಿ:
ದಕ್ಷಿಣ ಕೊಡಗಿನ ಹಲವೆಡೆ ಹುಲಿ ಹಾವಳಿ ಮುಂದುವರಿದಿರುವ ಬೆನ್ನಲ್ಲೇ ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿ ಗ್ರಾಮದಲ್ಲೂ ಹುಲಿ ಕಾಣಿಸಿಕೊಂಡಿರುವುದಾಗಿ ಹರಿದಾಡಿದ ಗಾಳಿಸುದ್ದಿ ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದ ಘಟನೆ ನಡೆದಿದೆ.

ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಹುಲಿಯ ಚಲವಲನದ ಯಾವುದೇ ಕುರುಹು ಪತ್ತೆಯಾಗಿಲ್ಲ. ಇದರಿಂದಾಗಿ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ನೆಲ್ಯಹುದಿಕೇರಿ ಗ್ರಾಮದ ವ್ಯಕ್ತಿಯೊಬ್ಬರು ಕಾವೇರಿ ಸೇತುವೆಯ ಬಳಿ ಹುಲಿಯನ್ನು ಹೋಲುವ ಪ್ರಾಣಿಯನ್ನು ನೋಡಿದ್ದು, ಈ ಬಗ್ಗೆ ನೆಲ್ಯಹುದಿಕೇರಿ ಗ್ರಾ.ಪಂ ಅಧ್ಯಕ್ಷ ಸಾಬು ವರ್ಗೀಸ್ ಹಾಗೂ ಇತರರಿಗೆ ಮಾಹಿತಿ ನೀಡಿದ್ದಾರೆ.

ಇದನ್ನು ಕೆಲವರು ವಾಟ್ಸಾಪ್’ನಲ್ಲಿ ಆಡಿಯೋ ಸಂದೇಶ ಮಾಡಿ ಗ್ರೂಪ್’ಗಳಿಗೆ ಶೇರ್ ಮಾಡಿದರೆ, ಇನ್ನೂ ಮುಂದುವರಿದ ಕೆಲವರು ಹುಲಿ ಓಡಾಡುವ ವೀಡಿಯೋವನ್ನು ಶೇರ್ ಮಾಡುವ‌ ಮೂಲಕ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು.

ವಿಷಯ ತಿಳಿದ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಹಾಗೂ ಸಿಬ್ಬಂದಿಗಳು ಬುಧವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಹುಲಿ ಮರಿಯನ್ನು ಹೋಲುವ ಪ್ರಾಣಿಯನ್ನು ನೋಡಿರುವುದಾಗಿ ತಿಳಿಸಿದ್ದ ಕಬೀರ್ ಎಂಬವರಿಂದಲೂ ಮಾಹಿತಿ ಪಡೆದರು. ಈ ಸಂದರ್ಭ ಸಿದ್ದಾಪುರ ಸೇತುವೆಯತ್ತ ಆ ಪ್ರಾಣಿ ತೆರಳಿರುವುದಾಗಿ ದೊರೆತ ಮಾಹಿಯನ್ವಯ ಅತ್ತ ತೆರಳಿ ಪರಿಶೀಲಿಸಿದಾಗ, ಸೇತುವೆ ಬಳಿ ಚಿರತೆ ಬೆಕ್ಕಿನ ಮೃತದೇಹ ಪತ್ತೆಯಾಗಿದೆ.

ನೆಲ್ಯಹುದಿಕೇರಿಯಲ್ಲಿ ಹುಲಿ ಇರುವುದಾಗಿ ವಾಟ್ಸಾಪ್’ನಲ್ಲಿ ಹರಿದಾಡಿದ್ದು ಸುಳ್ಳು ಸುದ್ದಿ ಹಾಗೂ ಹಳೆಯ ವೀಡಿಯೊ ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಆತಂಕಕ್ಕೆ ಒಳಗಾಗಿದ್ದ ಗ್ರಾಮಸ್ಥರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!