July 30, 2026
Thursday, July 30, 2026
spot_img

ಜೀವಾವಧಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ವಿನಯ್ ಕುಲಕರ್ಣಿ: ಸಿಬಿಐಗೆ ನೊಟೀಸ್ ಜಾರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ನೀಡಿರುವುದನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಮತ್ತು ಚಂದ್ರಶೇಖರ್ ಇಂಡಿ ಹೈಕೋರ್ಟ್​ ಗೆ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್, ಸಿಬಿಐಗೆ ನೊಟೀಸ್ ಜಾರಿಗೊಳಿಸಿದೆ.

ಇತ್ತೀಚೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿನಯ್​ ಕುಲಕರ್ಣಿ ಸೇರಿದಂತೆ 16 ಅಪರಾಧಿಗಳಿಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಈ ಹಿನ್ನೆಲೆ ಶಿಕ್ಷೆ ರದ್ದು ಮಾಡುವಂತೆ ಕೋರಿ ವಿನಯ್‌ ಕುಲಕರ್ಣಿ ಮತ್ತು ಚಂದ್ರಶೇಖರ್‌ ಇಂಡಿ ಸಲ್ಲಿಸಿರುವ ಮೇಲ್ಮನವಿಗಳನ್ನು ನ್ಯಾಯಮೂರ್ತಿಗಳಾದ ಮೊಹಮ್ಮದ್‌ ನವಾಜ್‌ ಮತ್ತು ಟಿ ವೆಂಕಟೇಶ್‌ ನಾಯಕ್‌ ಅವರ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ವಿನಯ್‌ ಕುಲಕರ್ಣಿ ಪರವಾಗಿ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ವಾದ ಮಂಡಿಸಿ, ಸೂಕ್ತವಾದ ಸಾಕ್ಷ್ಯಗಳಿಲ್ಲದಿದ್ದರೂ ವಿನಯ್ ಕುಲಕರ್ಣಿಯವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ಕೂಡ ಮೆರಿಟ್ ಆಧಾರದ ಮೇಲೆ ಜಾಮೀನು ನೀಡಿತ್ತು. ಹೀಗಾಗಿ ಶಿಕ್ಷೆ ಅಮಾನತು ಮಾಡಬೇಕು ಎಂದು ಮನವಿ ಮಾಡಿದರು.

ಸಿಬಿಐ ಪರ ವಕೀಲರು ಕೂಡ ವಾದ ಮಂಡಿಸಿದ್ದು, ವಿಚಾರಣಾಧೀನ ನ್ಯಾಯಾಲಯ ನೀಡಿರುವ ತೀರ್ಪು ಬರೋಬ್ಬರಿ 680 ಪುಟಗಳಷ್ಟಿದೆ. ಎಲ್ಲವನ್ನುಅಧ್ಯಯನ ಮಾಡಿ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶದ ಅಗತ್ಯವಿದೆ ಎಂದರು.

ವಾದ ಆಲಿಸಿದ ನ್ಯಾಯಪೀಠವು, ಮೆರಿಟ್ ಆಧಾರದ ಮೇಲೆ ವಿಚಾರಣೆ ನಡೆಸುವುದಿಲ್ಲ ಎಂದು ತಿಳಿಸಿದ್ದು, ಸಿಬಿಐಗೆ ನೊಟೀಸ್ ಜಾರಿ ಮಾಡಿತು. ಜೊತೆಗೆ ರಜಾಕಾಲದ ಪೀಠದ ಮುಂದೆ ಅರ್ಜಿಯ ವಿಚಾರಣೆಗೆ ಅವಕಾಶ ನೀಡಬೇಕು ಎಂಬ ಕೋರಿದ್ದ ಸಿ.ವಿ. ನಾಗೇಶ್ ಅವರ ಮನವಿಯನ್ನು ಪುರಸ್ಕರಿಸಿತು. ವಿಚಾರಣೆಯನ್ನು ಮುಂದೂಡಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !