ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಲಿಂಪಿಕ್ಸ್ ನಲ್ಲಿ ಕೇವಲ 100 ಗ್ರಾಂ ತೂಕ ಹೆಚ್ಚಿದ್ದ ಕಾರಣದಿಂದ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ. ಇದರಿಂದ ನಿರ್ಜಲೀಕರಣದಿಂದಾಗಿ ಬಳಲುತ್ತಿರುವ ವಿನೇಶ್ ಅವರನ್ನು ಪ್ಯಾರಿಸ್ನ ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿರುವ ಕ್ಲಿನಿಕ್ನಲ್ಲಿ ದಾಖಲಿಸಲಾಗಿದೆ.
ವಿನೇಶ್ರನ್ನು ಭಾರತೀಯ ಒಲಿಂಪಿಕ್ಸ್ ಅಸೋಷಿಯೇಷನ್ (IOA) ಅಧ್ಯಕ್ಷೆ ಪಿ.ಟಿ.ಉಷಾ ಅವರು ಭೇಟಿಯಾಗಿ ಅರೋಗ್ಯ ವಿಚಾರಿಸಿದ್ದಾರೆ.
ಬಳಿಕ ಮಾತನಾಡಿದ ಉಷಾ , ವಿನೇಶ್ ಅವರ ಅನರ್ಹತೆ ಆಘಾತಕಾರಿಯಾಗಿದೆ. ನಾನು ಸ್ವಲ್ಪ ಸಮಯಕ್ಕೂ ಮುಂಚೆ ಒಲಿಂಪಿಕ್ ವಿಲೇಜ್ ಪಾಲಿಕ್ಲಿನಿಕ್‌ನಲ್ಲಿ ವಿನೇಶ್ ಅವರನ್ನು ಭೇಟಿಯಾಗಿದ್ದೆ ಮತ್ತು ಅವರಿಗೆ ಭಾರತೀಯ ಒಲಿಂಪಿಕ್ ಸಂಸ್ಥೆ, ಭಾರತ ಸರ್ಕಾರ ಮತ್ತು ಇಡೀ ದೇಶದಿಂದ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದ್ದೇನೆ. ನಾವು ವಿನೇಶ್‌ಗೆ ಎಲ್ಲಾ ರೀತಿಯ ವೈದ್ಯಕೀಯ ಮತ್ತು ಭಾವನಾತ್ಮಕ ಬೆಂಬಲವನ್ನು ನೀಡುತ್ತಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.
ಅನರ್ಹತೆಯ ಬಗ್ಗೆ ಮಾತನಾಡಿರುವ ಪಿ.ಟಿ. ಉಷಾ ಮತ್ತು ತಂಡದ ವೈದ್ಯ ಪದ್ರಿವಾಲಾ, ‘ವಿನೇಶ್ ಫೋಗಟ್ ಅನರ್ಹತೆಯ ವಿರುದ್ಧ ಭಾರತೀಯ ಒಲಿಂಪಿಕ್ ಸಂಸ್ಥೆ ನಿರಂತರವಾಗಿ ಧ್ವನಿ ಎತ್ತುತ್ತಿದೆ. ಡಬ್ಲ್ಯುಎಫ್‌ಐ ಕೂಡ ಒಲಿಂಪಿಕ್ ಸಮಿತಿಗೆ ಪತ್ರ ಬರೆದು ವಿನೇಶ್ ಅವರನ್ನು ಹೊರಗಿಡುವುದಕ್ಕೆ ವಿರೋಧ ವ್ಯಕ್ತಪಡಿಸಿದೆ ಎಂದಿದ್ದಾರೆ.
ವಿನೇಶ್ ಅವರ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಸದ್ಯ ಆಕೆ ಆರೋಗ್ಯವಾಗಿದ್ದಾರೆ. ವಿನೇಶ್ ದೈಹಿಕವಾಗಿ ಚೆನ್ನಾಗಿದ್ದಾರೆ ಆದರೆ ಮಾನಸಿಕವಾಗಿ ಅವರು ತುಂಬಾ ಕುಗ್ಗಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ತೂಕ ಹೆಚ್ಚಳದ ಬಗ್ಗೆ ಮಾಹಿತಿ ನೀಡಿರುವ ವೈದ್ಯ ಪರ್ದಿವಾಲಾ, ‘ಕೆಲವೊಮ್ಮೆ ನಿರಂತರ ಪಂದ್ಯಗಳಿಂದ ಹೆಚ್ಚು ನೀರು ಕುಡಿಯಬೇಕಾಗುತ್ತದೆ, ಅಂತಹ ಪರಿಸ್ಥಿತಿಯಲ್ಲಿ ತೂಕ ಹೆಚ್ಚಾಗುತ್ತದೆ. ರಾತ್ರಿ ವಿನೇಶ್‌ನ ತೂಕ ಹೆಚ್ಚಾದಾಗ ಅದನ್ನು ಕಡಿಮೆ ಮಾಡಲು ವೈದ್ಯಕೀಯ ತಂಡ ಅನೇಕ ಪ್ರಯತ್ನಗಳನ್ನು ಮಾಡಿತು, ಅವರ ಕೂದಲನ್ನು ಸಹ ಕತ್ತರಿಸಲಾಯಿತು. ಆದರೆ ಬೆಳಿಗ್ಗೆ 7 ಗಂಟೆಗೆ ಅವರನ್ನು ತೂಕ ಮಾಡಿದಾಗ, ಅವರು ನಿಗದಿಗಿಂತ 100 ಗ್ರಾಂ ಹೆಚ್ಚು ತೂಕ ಇರುವುದು ಕಂಡುಬಂದಿತ್ತು ಎಂದಿದ್ದಾರೆ.