ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದೆ, ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಬೆಳಗ್ಗೆ ಇಬ್ಬರು ವೃದ್ಧರ ಮೃತದೇಹಗಳು ಪತ್ತೆಯಾಗಿದ್ದು, ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.ನಿನ್ನೆ ನಡೆದ ಗುಂಡಿನ ದಾಳಿಯ ನಂತರ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ದಿನದ ಹಿಂದೆ, ಜಿರಿಬಾಮ್ ಜಿಲ್ಲೆಯಲ್ಲಿ ಶಂಕಿತ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆದಿತ್ತು, ಇದರಲ್ಲಿ 11 ಉಗ್ರರು ಹತರಾಗಿದ್ದರು.ನಾಪತ್ತೆಯಾದವರಿಗಾಗಿ ಆರಂಭಿಸಲಾದ ಶೋಧ ಕಾರ್ಯಾಚರಣೆಯಲ್ಲಿ ಜಕುರಧೋರ್ ಕರೋಂಗ್ ಪ್ರದೇಶದಲ್ಲಿ ಅವಶೇಷಗಳಡಿಯಲ್ಲಿ ಲೈಶ್ರಾಮ್ ಬಾಲೆನ್ ಮತ್ತು ಮೈಬಮ್ ಕೇಶೋ ಅವರ ಶವಗಳು ಪತ್ತೆಯಾಗಿವೆ.
ಸೋಮವಾರ ಈ ಸ್ಥಳದಲ್ಲಿ ಶಂಕಿತ ಉಗ್ರರು ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಜುಕುರಾದೋರ್ ಕರೋಂಗ್ ಪ್ರದೇಶದಲ್ಲಿ ಉಗ್ರರು ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಿದ ನಂತರ ಇಬ್ಬರು ವೃದ್ಧರು ಸಾವನ್ನಪ್ಪಿದ್ದಾರೆ.
ಈ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿರಿಬಾಮ್ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿಯೊಂದಿಗಿನ ಎನ್‌ಕೌಂಟರ್‌ನಲ್ಲಿ ಶಂಕಿತ ಉಗ್ರರನ್ನು ಕೊಂದಿರುವುದನ್ನು ವಿರೋಧಿಸಿ ಕುಕಿ-ಜೋ ಪ್ರಾಬಲ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಮಂಗಳವಾರ ಮುಂಜಾನೆ 5 ಗಂಟೆಯಿಂದ ಬಂದ್ಕೆ ಕರೆ ನೀಡಲಾಗಿದೆ.