ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲೇ ಕುತೂಹಲ ಕೆರಳಿಸಿರುವ ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ, ಕೇರಳದ ವಯನಾಡ್ ಸೇರಿದಂತೆ 2 ಲೋಕಸಭೆ ಕ್ಷೇತ್ರ ಮತ್ತು 34 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಬುಧವಾರ ನಡೆಯಲಿವೆ.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ಬುಧವಾರ ಮೊದಲ ಹಂತದಲ್ಲಿ 38 ಸ್ಥಾನಗಳಿಗೆ ಮತದಾನ ನಡೆಯಲಿದೆ. 37 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. 683 ಅಭ್ಯರ್ಥಿಗಳು ಇಲ್ಲಿ ಸ್ಪರ್ಧಿಸಿದ್ದು, ಕಾಂಗ್ರೆಸ್-ಜೆಎಂಎಂ ಕೂಟ, ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದ ನಡುವೆ ನೇರ ಹಣಾಹಣಿ ಇದೆ. ಇತ್ತೀಚೆಗೆ ಜೆಎಂಎಂ ತೊರೆದು ಬಿಜೆಪಿ ಸೇರಿದ್ದ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಈ ಹಂತದ ಪ್ರಮುಖ ಅಭ್ಯರ್ಥಿ. ಜೆಎಂಎಂ-ಕಾಂಗ್ರೆಸ್ಸನ್ನು ಕೆಳಗಿಳಿಸಿ ಅಧಿಕಾರಕ್ಕೇರಲು ಇಲ್ಲಿ ಬಿಜೆಪಿ ಹವಣಿಸುತ್ತಿದೆ.
ಜಾರ್ಖಂಡ್‌ನ 43 ಕ್ಷೇತ್ರಗಳಿಗೆ 2ನೇ ಹಂತದ ಮತದಾನ ಹಾಗೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನ.20ರಂದು ನಡೆಯಲಿವೆ. ಬಳಿಕ ಈ ಎಲ್ಲ ಕಡೆ ನ.23ರಂದು ಒಟ್ಟಿಗೇ ಫಲಿತಾಂಶ ಪ್ರಕಟವಾಗಲಿವೆ.
ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಕೇವಲ 1 ದಿನ ಉಳಿದಿರುವಾಗ ಪ್ರಣಾಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್, 250 ಯುನಿಟ್ ಉಚಿತ ವಿದ್ಯುತ್, ಜಾತಿ ಆಧಾರಿತ ಜನಗಣತಿ ಮತ್ತು 1 ವರ್ಷದೊಳಗೆ ಖಾಲಿ ಇರುವ ಎಲ್ಲಾ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದೆ.
ಬಡವರಿಗೆ ಪ್ರಸ್ತುತ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದನ್ನು 250 ಯುನಿಟ್‌ವರೆಗೆ ವಿಸ್ತರಿಸಲಾಗುವುದು. ನಾವು 1 ವರ್ಷದಲ್ಲಿ ಎಲ್ಲಾ ಖಾಲಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ’ ಎಂದು ಪಕ್ಷದ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಬಂಧು ಟಿರ್ಕೆ ಹೇಳಿದರು. ಇದೇ ವೇಳೆ, ಆದಿವಾಸಿಗಳ ಸರ್ನಾ ಧಾರ್ಮಿಕ ಸಂಹಿತೆಯ ಅನುಷ್ಠಾನ ಸೇರಿದಂತೆ 7 ಭರವಸೆಗಳ ಮೇಲೆ ಪ್ರಣಾಳಿಕೆ ಗಮನ ಕೇಂದ್ರೀಕರಿಸಿದೆ.