ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಸಂಭಾಲ್ ದಲ್ಲಿ ಮಸೀದಿಯೊಂದರ ಸಮೀಕ್ಷೆಗೆ ಸಂಬಂಧಿಸಿದಂತೆ ಭಾನುವಾರ ನಡೆದ ಘರ್ಷಣೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ, 20 ಪೊಲೀಸರು ಗಾಯಗೊಂಡಿದ್ದಾರೆ.
ನ್ಯಾಯಾಲಯದ ಆದೇಶದ ಮೇರೆಗೆ ಸರ್ವೇ ತಂಡ ಮಸೀದಿ ಬಳಿ ಆಗಮಿಸಿತ್ತು. ಇದು, ಸ್ಥಳೀಯರು ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು.
ಅಡ್ವೋಕೇಟ್ ಕಮಿಷನರ್ ನೇತೃತ್ವದ ಸಮೀಕ್ಷಾ ತಂಡವು ಸರ್ವೇ ಕೆಲಸ ಪ್ರಾರಂಭಿಸುತ್ತಿದ್ದಂತೆ ಮಸೀದಿಯ ಬಳಿ ಗುಂಪು ಜಮಾಯಿಸಿದಾಗ ಹಿಂಸಾಚಾರ ನಡೆಯಿತು. ಪೊಲೀಸರು ಮಸೀದಿಗೆ ಪ್ರವೇಶಿಸದಂತೆ ತಡೆಯಲು ಜನರು ಪ್ರಯತ್ನಿಸಿದರು.ಗುಂಪಿನಲ್ಲಿದ್ದ ಕೆಲವು ವ್ಯಕ್ತಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಿದರು. ಗುಂಪು ಹತ್ತಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿದೆ. ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.
ಮೃತರನ್ನು ನಯೀಮ್ ಖಾನ್, ಬಿಲಾಲ್ ಮತ್ತು ನೋಮನ್ ಎಂದು ಗುರುತಿಸಲಾಗಿದ್ದು, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯ ವೇಳೆ ಮೂವರು ಸಾವನ್ನಪ್ಪಿದ್ದಾರೆ. ನಯೀಮ್ ಖಾನ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಆರೋಪಿಸಿದ್ದು ನಂತರ ಪ್ರತಿಭಟನೆ ಮತ್ತು ಆಕ್ರೋಶ ಹೆಚ್ಚಾಯಿತು.
ಮಸೀದಿಯು ಈಗ ಇರುವ ಸ್ಥಳದಲ್ಲಿ ಒಂದು ಕಾಲದಲ್ಲಿ ದೇವಾಲಯವಿತ್ತು. ಮಸೀದಿ ಸರ್ವೇ ನಡೆಸುವಂತೆ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಸರ್ವೇಗೆ ಅನುಮತಿ ನೀಡಿತು. ಮಂಗಳವಾರವೂ ಇದೇ ಸಮೀಕ್ಷೆ ನಡೆದಿರುವುದರಿಂದ ಸಂಭಾಲ್‌ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.