August 19, 2026
Wednesday, August 19, 2026
spot_img

PoKಯಲ್ಲಿ ಭುಗಿಲೆದ್ದ ಹಿಂಸಾಚಾರ: ಪಾಕ್ ಪಡೆಗಳ ಗುಂಡಿನ ದಾಳಿಗೆ 6 ನಾಗರಿಕರು ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಪಾಕಿಸ್ತಾನಿ ಭದ್ರತಾ ಪಡೆಗಳ ದಮನಕಾರಿ ನೀತಿ ಮತ್ತು ದೌರ್ಜನ್ಯದ ವಿರುದ್ಧ ನಾಗರಿಕರ ಆಕ್ರೋಶ ಮತ್ತಷ್ಟು ತೀವ್ರಗೊಂಡಿದೆ. ರಾವಲಕೋಟ್ ನಗರದ ಹೊಸ ಬಸ್ ಟರ್ಮಿನಲ್ ಸಬೀಪ ನಡೆದ ಭೀಕರ ಘರ್ಷಣೆಯಲ್ಲಿ, ಪಾಕ್ ಪಡೆಗಳು ನಡೆಸಿದ ಮನಬಂದಂತೆ ಗುಂಡಿನ ದಾಳಿಗೆ ಆರು ಜನ ಅಮಾಯಕ ನಾಗರಿಕರು ಬಲಿಯಾಗಿದ್ದಾರೆ.

ಮೃತರನ್ನು ರಾವಲ್ಕೋಟ್‌ನ ಮಟಿಯಲ್ ಮೀರಾ ಬಸ್ ಟರ್ಮಿನಲ್ ನಿವಾಸಿಗಳಾದ ಜಾಹಿದ್ ಮುಘಲ್, ಜಾಫರ್ ಮುಘಲ್, ಅರ್ಸಲಾನ್ ಅಕ್ಬರ್ ಮತ್ತು ವಾಜಿದ್ ಹಯಾತ್ ಎಂದು ಗುರುತಿಸಲಾಗಿದೆ. ಈ ಘಟನೆಯು ಸ್ಥಳೀಯರಲ್ಲಿ ತೀವ್ರ ಆಕ್ರೋಶವನ್ನು ಹುಟ್ಟುಹಾಕಿದ್ದು, ಇಡೀ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಶ್ವೇತಭವನದ ಎದುರು ಬೃಹತ್ ಪ್ರತಿಭಟನೆ

ಈ ರಕ್ತಪಾತ ನಡೆಯುವ ಮುನ್ನವೇ, ಅಮೆರಿಕದಲ್ಲಿ ನೆಲೆಸಿರುವ ಪಿಒಕೆ ಮೂಲದ ಪ್ರಜೆಗಳು ವಾಷಿಂಗ್ಟನ್‌ನ ಶ್ವೇತಭವನದ (White House) ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಭಾಗದಲ್ಲಿ ದಿನೇದಿನೇ ಕ್ಷೀಣಿಸುತ್ತಿರುವ ಮಾನವ ಹಕ್ಕುಗಳ ಪರಿಸ್ಥಿತಿ ಹಾಗೂ ಮಾನವೀಯ ಬಿಕ್ಕಟ್ಟಿನ ಕಡೆಗೆ ಜಾಗತಿಕ ಸಮುದಾಯದ ಗಮನ ಸೆಳೆಯುವುದು ಈ ಪ್ರತಿಭಟನೆಯ ಮುಖ್ಯ ಉದ್ದೇಶವಾಗಿತ್ತು.

ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಕ್ಕೂ ಹೆಚ್ಚು ಸಮುದಾಯದ ಮುಖಂಡರು ಪಾಕ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೆ, ಪಾಕ್ ಆಕ್ರಮಿತ ಕಾಶ್ಮೀರದ ನಾಗರಿಕ ವಸತಿ ಪ್ರದೇಶಗಳಿಂದ ಪಾಕಿಸ್ತಾನಿ ಮಿಲಿಟರಿ ಪಡೆಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಪ್ರತಿಭಟನಾಕಾರರು ಜಾಗತಿಕ ನಾಯಕರನ್ನು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !