ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರ(Manipur)ದಲ್ಲಿ ಮೈತಿ ಜನಾಂಗಕ್ಕೆ ಪರಿಶಿಷ್ಟ ಸ್ಥಾನಮಾನದ ಬೇಡಿಕೆ ವಿರೋಧಿಸಿ ನಡೆದ ಮೆರವಣಿಗೆಯಲ್ಲಿ ಉಂಟಾದ ಹಿಂಸಾಚಾರ ಇಂದು ಸುಪ್ರೀಂ ಕೋರ್ಟ್ ನಲ್ಲೂ ಸದ್ದು ಮಾಡಿದೆ.
ಗುಡ್ಡಗಾಡು ಜಿಲ್ಲೆಯಾದ ಚುರಾಚಂದ್‌ಪುರದಿಂದ ರಾಜಧಾನಿ ಇಂಫಾಲ್‌ವರೆಗೆ ಮಣಿಪುರ ರಾಜ್ಯಾದ್ಯಂತ ಕುಕಿ ಬುಡಕಟ್ಟು ಜನಾಂಗ ಮತ್ತು ಬಹುಸಂಖ್ಯಾತ ಮೈತಿ ಸಮುದಾಯದ ನಡುವಿನ ಹಿಂಸಾಚಾರವು ಉತ್ತುಂಗಕ್ಕೇರಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಮಣಿಪುರ ಹಿಂಸಾಚಾರದ ಬಗ್ಗೆ ಎಸ್‌ಐಟಿ ತನಿಖೆಗೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸುತ್ತಿದ್ದಂತೆ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ರಾಜ್ಯದಲ್ಲಿ ಹಿಂಸಾಚಾರದಿಂದಾಗಿ ಜೀವ ಮತ್ತು ಆಸ್ತಿಪಾಸ್ತಿ ನಷ್ಟದ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಹಿಂಸಾಚಾರದಿಂದಾಗಿ ಮನೆ, ಬದುಕು ಕಳೆದುಕೊಂಡು ನಿರಾಶ್ರಿತರಾಗಿರುವ ಜನರ ರಕ್ಷಣೆ ಸಂಬಂಧಿಸಿದಂತೆ ತಕ್ಷಣದ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯಕ್ಕೆ ಆದೇಶ ನೀಡಿದೆ. ಈಗಾಗಲೇ ಸ್ಥಳಾಂತರಗೊಂಡ ಜನರ ಬಗ್ಗೆ ಅವರ ಮುಂದಿನ ಜೀವನದ ಬಗ್ಗೆ ಯಾವ ಕ್ರಮ ತೆಗೆದುಕೊಂಡಿದ್ದೀರಾ ಎಂದು ಸುಪ್ರೀಂ ಕೇಳಿದೆ.