ಬಾಗ್ದಾದ್‌ನಲ್ಲಿ ಹಿಂಸಾತ್ಮಕ ಘರ್ಷಣೆ: ಭದ್ರತಾ ಪಡೆಗಳ ಗುಂಡಿನ ದಾಳಿಗೆ 15 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇರಾಕ್ ರಾಜಧಾನಿ ಬಾಗ್ದಾದ್‌ನ ಗ್ರೀನ್‌ ಜೋನ್‌ನಲ್ಲಿ ಹಿಂಸಾತ್ಮಕ ಘರ್ಷಣೆಗಳು ಭುಗಿಲೆದ್ದಿದ್ದು, 15 ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ನೂರಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇರಾಕಿನ ಶಿಯಾ ಧರ್ಮಗುರು ಮೊಖ್ತಾದಾ ಅಲ್-ಸದರ್ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಬಳಿಕ ಹಿಂಸಾತಕ ಪ್ರತಿಭಟನೆಗಳು ಶುರುವಾಗಿವೆ. ಇರಾಕ್‌ನ ರಿಪಬ್ಲಿಕನ್ ಅರಮನೆಯಿಂದ ಪ್ರತಿಭಟನಾಕಾರರನ್ನು ಓಡಿಸಲು ಭದ್ರತಾ ಪಡೆ ಅಶ್ರುವಾಯು ಮತ್ತು ಲೈವ್ ಬುಲೆಟ್‌ಗಳನ್ನು ಹಾರಿಸಿದ್ದು, ಘಟನೆಯಲ್ಲಿ 15 ಮಂದಿ ಸಾವನ್ನಪ್ಪಿರುವುದಾಗಿ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಇರಾಕ್‌ನಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿದೆ. ಹಂಗಾಮಿ ಪ್ರಧಾನಿ ಮುಸ್ತಫಾ ಅಲ್ ಖಾದೇಮಿ ಅವರ ನೇತೃತ್ವದ ಸರ್ಕಾರ ಹಲವು ತಿಂಗಳುಗಳಿಂದ ಅಧ್ಯಕ್ಷರಿಲ್ಲದೆ ದೇಶವನ್ನು ಆಳುತ್ತಿದೆ. ಆ ದೇಶದಲ್ಲಿ ಚುನಾವಣೆ ನಡೆದು ತಿಂಗಳುಗಳೇ ಕಳೆದಿವೆ, ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಇರಾಕ್‌ ಕೋ ಆರ್ಡಿನೇಷನ್‌ ಫ್ರೇಮ್‌ ವರ್ಕ್‌ ಎಲ್ಲಾ ಪಕ್ಷಗಳನ್ನು ಒಟ್ಟುಗೂಡಿಸಿ ತಾತ್ಕಾಲಿಕ ಸರ್ಕಾರವನ್ನು ರಚನೆ ಮಾಡಿದೆ. ಇದನ್ನು ಬಲವಾಗಿ ಖಂಡಿಸಿರುವ ಮೊಖ್ತಾದಾ ಸದರ್ ಬೆಂಬಲಿಗರು ಹಿಂಸಾತ್ಮಕ ಘರ್ಷಣೆಗಳಿಗೆ ಇಳಿದಿದ್ದಾರೆ. ಚುನಾವಣಾ ಫಲಿತಾಂಶಗಳಲ್ಲಿ ಸದರ್ ಅವರ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಲ್ಲಿ ವಿಫಲವಾಯಿತು. ಸರ್ಕಾರ ರಚನೆ ವಿಚಾರವಾಗಿ ಪ್ರತಿಪಕ್ಷಗಳ ಜತೆ ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ.

ಸಂಸತ್ ಭವನಕ್ಕೆ ನುಗ್ಗಿ ದೊಡ್ಡ ಮಟ್ಟದಲ್ಲಿ ಸದರ್‌ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಘರ್ಷಣೆಗಳ ಹಿನ್ನೆಲೆಯಲ್ಲಿ ಹಂಗಾಮಿ ಪ್ರಧಾನ ಮಂತ್ರಿ ಮುಸ್ತಫಾ ಅಲ್ ಅವರ ಕಚೇರಿ ಮುಂದಿನ ಸೂಚನೆ ಬರುವವರೆಗೂ ಸರ್ಕಾರವು ಎಲ್ಲಾ ಸಭೆಗಳು ಮತ್ತು ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದೆ ಎಂಬ ಸೂಚನೆ ಹೊರಡಿಸಿದೆ. ಇದೇ ಸಮಯದಲ್ಲಿ ಪೋಲೀಸ್ ಮತ್ತು ಭದ್ರತಾ ಪಡೆಗಳು ಗುಂಡು ಹಾರಿಸದಂತೆ ತಾಕೀತು ಮಾಡಿದ್ದಾರೆ. ಎಲ್ಲರೂ ಶಾಂತಿಯುತವಾಗಿ ನಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!