Monday, October 3, 2022

Latest Posts

ಕೊಡಗಿನ ಗೌರಮ್ಮ ಸ್ವಾತಂತ್ರ್ಯ ಹೋರಾಟಗಾರ್ತಿಯೂ ಹೌದು: ಕೇಶವ ಕಾಮತ್

ಹೊಸದಿಗಂತ ವರದಿ, ಮಡಿಕೇರಿ:
ಕೊಡಗಿನ ಗೌರಮ್ಮ ಕನ್ನಡದ ಮೊದಲ ಕಥೆಗಾರ್ತಿ ಮಾತ್ರವಲ್ಲ. ಆಕೆ ಒಬ್ಬ ಸ್ವಾತಂತ್ರ್ಯ ಹೋರಾಟಗಾರ್ತಿ ಹೌದು ಎಂದು ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೊಡಗು ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಣ್ಣ ಕಥೆಗಳ ಗೌರಮ್ಮ ದತ್ತಿನಿಧಿ ಕಥಾ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿದರು.
ಕೊಡಗಿನ ಗೌರಮ್ಮ ಕನ್ನಡದ ಪ್ರಥಮ ಕಥೆಗಾರ್ತಿ. ಸಣ್ಣ ಸಣ್ಣ ಕಥೆಗಳನ್ನು ಬರೆಯುವ ಮೂಲಕ ಪ್ರಖ್ಯಾತಿ ಪಡೆದವರು. ಆಕೆ ಕಥೆಗಾರ್ತಿ ಮಾತ್ರವಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ಹಣ ಸಂಗ್ರಹದ ನಿಮಿತ್ತ ಕೊಡಗಿಗೆ ಬಂದಿದ್ದ ಮಹಾತ್ಮ ಗಾಂಧಿಯವರಿಗೆ ತಮ್ಮ ಮೈ ಮೇಲಿನ ಚಿನ್ನಾಭರಣವನ್ನು ನೀಡುವುದರ ಮೂಲಕ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿಯೂ ಹೆಸರು ಮಾಡಿದ್ದಾರೆ ಎಂದರು.
ಗೌರಮ್ಮ ಅವರ ಪುತ್ರ ಬಿ.ಜಿ ವಸಂತ ಅವರು, ಕೊಡಗಿನ ಗೌರಮ್ಮ ಅವರ ಹೆಸರಿನಲ್ಲಿ ಎರಡು ದತ್ತಿಗಳನ್ನು ಸ್ಥಾಪನೆ ಮಾಡಿದ್ದು, ಈಗಾಗಲೇ 14 ಪ್ರಶಸ್ತಿಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳಲ್ಲಿ ಕಥೆಯ ಆಸಕ್ತಿ ಬಿತ್ತುವ ಸಲುವಾಗಿ ಅವರಿಗೂ ಕೂಡಾ ಪ್ರತ್ಯೇಕ ದತ್ತಿಯನ್ನು ಸ್ಥಾಪನೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳನ್ನು ಸಾಹಿತ್ಯಿಕವಾಗಿ ಬೆಳೆಸುವ ದೃಷ್ಟಿಯಿಂದ ಕಥೆ ರಚನೆಯಂತಹ ಸ್ಪರ್ಧೆಗಳನ್ನು ಏರ್ಪಡಿಸುತ್ತಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲೆಗಳಲ್ಲಿ ಕನ್ನಡ ಸಂಘಗಳನ್ನು ಕಟ್ಟುವ ಕೆಲಸಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಕಥೆಗಾರ ಗಂಭೀರವಾಗಿರಬಾರದು:
ಸಣ್ಣ ಕಥಾ ರಚನೆ ಕುರಿತು ಮಾತನಾಡಿದ ಸಣ್ಣ ಕಥೆಗಾರ ರಂಜಿತ್ ಕವಲಾಪರ ಅವರು, ಕಥೆಗಾರರು ಹೆಚ್ಚು ಗಂಭೀರವಾಗಿ ಇರಬಾರದು. ಕಥೆಗಾರರಿಗೆ ಕಥಾ ವಸ್ತುಗಳು ಸಿಗುವುದು ಜನಸಾಮಾನ್ಯರ ನಡುವೆ. ಅದಕ್ಕಾಗಿ ಆತ ಜನರ ನಡುವೆ ಬೆರೆಯಬೇಕು. ಕಥೆಗಳನ್ನು ವಿಷಯ ಆಧಾರಿತವಾಗಿ ಬರೆಯಲು ಕಷ್ಟ. ಸಣ್ಣ ಕಥೆಗಳೆಂದರೆ ಒಂದು ದೊಡ್ಡ ಘಟನೆಗಳನ್ನು ಸಣ್ಣದಾಗಿ ಹೇಳುವುದಾಗಿದೆ. ಕಥೆಗಳನ್ನು ಬರೆಯುವಾಗ ಆ ಕಥೆಯ ಪಾತ್ರ ಮತ್ತು ವಿಚಾರಗಳ ಬಗ್ಗೆ ನಮಗೆ ಗೊತ್ತಿರಬೇಕು. ಒಂದು ವಿಷಯದ ಕುರಿತು ಸ್ಪಷ್ಟತೆ ಇದ್ದಾಗ ಮಾತ್ರ ಆ ಪಾತ್ರದಲ್ಲಿ ನಾವು ಮುಳುಗಬಹುದು. ಮನುಷ್ಯನನ್ನು ಪಾತ್ರವಾಗಿ ರಚಿಸುವಾಗ ಮನುಷ್ಯ ಮನುಷ್ಯನಂತೆ ಕಾಣಬೇಕು. ನಮ್ಮ ಕಥೆಯ ನಾಯಕನನ್ನು ಹೆಚ್ಚು ಆಡಂಬರವಾಗಿ ಚಿತ್ರಿಸಬಾರದು. ವ್ಯಕ್ತಿಯ ಬಗ್ಗೆ ಬರೆಯುವಾಗ ಆತನ ವರ್ತನೆಗಳ ಜೊತೆ ಜೊತೆಯಲ್ಲೇ ನಾವಿರಬೇಕು. ವ್ಯಕ್ತಿಯ ನಡವಳಿಕೆಯ ಹಿನ್ನೆಲೆಯನ್ನು ಗಮನಿಸಬೇಕು. ಮತ್ತು ಅಷ್ಟೇ ತಾಳ್ಮೆ ಕಥೆಗಾರನಿಗೆ ಇರಬೇಕು. ಕಥೆಗಾರನಲ್ಲಿ ಆತುರ ಇರಬಾರದು. ತಾಳ್ಮೆಯ ಗ್ರಹಿಕೆ ಇರಬೇಕು. ಒಂದು ವಿಷಯದ ಬಗ್ಗೆ ಬರೆಯುವಾಗ ಆ ವಿಷಯದ ಕುರಿತು ನಾವು ತಿಳಿದುಕೊಂಡಿರಬೇಕು. ಗೌರಮ್ಮನವರ ಬಗ್ಗೆ ಬರೆಯುವಾಗ ಅವರ ವ್ಯಕ್ತಿತ್ವದ ಹಿನ್ನೆಲೆ ಗೊತ್ತಿರಬೇಕು. ಇತಿಹಾಸದ ಬಗ್ಗೆ ಬರೆಯುವಾಗ ತುಂಬಾ ಎಚ್ಚರಿಕೆಯಿಂದ ಬರೆಯಬೇಕು. ಪರಿಸ್ಥಿತಿಯನ್ನು ತುಂಬಾ ಗಮನಿಸಬೇಕು. ಕಥೆಗಾರರು ತಾವು ಬರೆದ ಕಥೆಯನ್ನು ಒಂದಷ್ಟು ದಿನಗಳವರೆಗೆ ಹಾಗೆ ಇಟ್ಟಿರಬೇಕು. ಹಾಗಿದ್ದಾಗ ತಾವು ಬರೆದುದರಲ್ಲಿರುವ ಒಂದಷ್ಟು ಗೊಂದಲಗಳು ನಮಗೆ ಅರ್ಥವಾಗುತ್ತದೆ. ಅಮಲಿನಲ್ಲಿ ಇರುವಾಗ, ತುಂಬಾ ಸಿಟ್ಟು ಮತ್ತು ಸಂತೋಷದಲ್ಲಿ ಇರುವಾಗ ಬರೆಯಬಾರದು. ಕಥೆ ಬರೆಯುವಾಗ ಒಂದು ಪಯಣ ಇರಬೇಕು. ಅನುಭವಕ್ಕೆ ವಯಸ್ಸಾದಾಗ ಅದನ್ನು ಬರೆದರೆ ಹೆಚ್ಚು ಇಷ್ಟವಾಗಿಬಿಡುತ್ತದೆ. ಆ ಕ್ಷಣಕ್ಕೆ ಅನ್ನಿಸಿದಾಗ ಬರೆದರೆ ಅದಕ್ಕೆ ಪಕ್ವತೆ ಇರುವುದಿಲ್ಲ. ಓದುವ ಆಸಕ್ತಿಯನ್ನು ನಾವು ಮೈಗೂಡಿಸಿಕೊಳ್ಳಬೇಕು. ಕನ್ನಡ ಕಾಲಕಾಲಕ್ಕೆ ಬದಲಾದ ಭಾಷೆ. ಈಗಿನ ಕನ್ನಡದಲ್ಲಿ ಸರಳವಾಗಿ ಕಥೆ ಬರೆಯಬಹುದು. ಕಥೆಗಾರರು ನಿನ್ನೆಯ ಚಿಂತೆಯನ್ನು ಬಿಡಬೇಕು. ನಾಳೆಯ ಚಿಂತೆಯನ್ನು ತೆಗೆದುಹಾಕಬೇಕು. ಆ ಕ್ಷಣವನ್ನು ಮಾತ್ರ ಆನಂದಿಸಬೇಕು ಎಂದರು.
ಕನ್ನಡದ ಅತ್ಯದ್ಭುತ ಕಥೆಗಾರರು ತುಂಬಾ ಇಂಗ್ಲೀಷ್ ಓದುತ್ತಿದ್ದರು. ಆದರೆ ಸಾಧ್ಯವಾದಷ್ಟು ಮೂಲ ಭಾಷೆಗಳಲ್ಲಿ ಪುಸ್ತಕಗಳನ್ನು ಓದುವ ಪ್ರಯತ್ನ ಮಾಡಬೇಕು. ಸಾಧ್ಯವಾದಷ್ಟು ಪರ ಭಾಷೆಗಳನ್ನು ಕಲಿತು, ಓದಿ ಮತ್ತು ತಮ್ಮ ಭಾಷೆಯಲ್ಲೇ ಬರೆಯಲು ಪ್ರಯತ್ನಿಸಬೇಕು. ಪರ ವ್ಯವಸ್ಥೆ, ಅಲ್ಲಿನ ಸಮಾಜ ಹೇಗಿದೆ ಎಂಬುದನ್ನು ಅರಿಯಲು ಮಾತ್ರ ಬೇರೆ ಬೇರೆ ಭಾಷೆಗಳ ಪುಸ್ತಕ ಓದಬೇಕು. ವಿದ್ಯಾರ್ಥಿಗಳು ಮೊದಲು ಉದ್ಯೋಗ ಗಿಟ್ಟಿಸಿಕೊಳ್ಳುವ ಹಾಗೆ ಮಾಡಿಕೊಳ್ಳಬೇಕು. ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡಬೇಕು. ಆದರೆ ನಂತರ ಕಥೆ ಬರೆಯಬೇಕು. ಇನ್ನೊಬ್ಬರ ಮಾತಿಗೆ ಹೆಚ್ಚು ಕಿವಿ ಕೊಡಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಸ್. ಐ. ಮುನೀರ್ ಅಹಮದ್ ಹಾಗೂ ರೇವತಿ ರಮೇಶ್, ಫ್ಯಾನ್ಸಿ ಮುತ್ತಣ್ಣ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅಂಬೆಕಲ್ಲು ನವೀನ್, ಅಲ್ಲಾರಂಡ ರಂಗಚಾವಡಿ ಮತ್ತು ಸಿರಿಗನ್ನಡ ವೇದಿಕೆಯ ಸ್ಥಾಪಕ ಅಧ್ಯಕ್ಷ ಅಲ್ಲಾರಂಡ ವಿಠ್ಠಲ್ ನಂಜಪ್ಪ,, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಿ. ಡಿ. ಶಿವಶಂಕರ್, ಶಾಲಾ ಮುಖ್ಯೋಪಾಧ್ಯಾಯಿನಿ ಹೆಚ್. ಕೆ. ಸುಶೀಲಾ, ವಿವಿಧ ಪ್ರೌಢಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!