ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಜಿನಿಯರಿಂಗ್ ಪದವಿ ಪಡೆದರೆ ದೊಡ್ಡ ಕಂಪನಿಯಲ್ಲಿ ಉದ್ಯೋಗ ಸಿಗಬೇಕು ಎಂಬುದು ಹಲವರ ಕನಸು. ಆದರೆ ಮುಂಬೈನ ಯುವಕನೊಬ್ಬ ಆ ದಾರಿಯನ್ನೇ ಬದಲಿಸಿ ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾನೆ.
ಇಂಜಿನಿಯರಿಂಗ್ ಮುಗಿಸಿದ ಬಳಿಕ 20 ರಿಂದ 30 ಸಾವಿರ ರೂಪಾಯಿ ಸಂಬಳದ ಉದ್ಯೋಗ ಅವಕಾಶಗಳು ಬಂದರೂ, ಅವುಗಳನ್ನು ತಿರಸ್ಕರಿಸಿ ಕ್ಯಾಬ್ ವ್ಯವಹಾರಕ್ಕೆ ಕಾಲಿಟ್ಟಿದ್ದಾನೆ.
ಉದ್ಯೋಗಕ್ಕಿಂತ ಉದ್ಯಮದತ್ತ ಒಲವು
ಬೆಂಗಳೂರು ಮೂಲದ ಕೆನಡಿಯನ್ ಕಂಟೆಂಟ್ ಕ್ರಿಯೇಟರ್ ಕಾಲೇಬ್ ಫ್ರೈಸೆನ್ ಜೊತೆಗಿನ ಸಂಭಾಷಣೆಯಲ್ಲಿ ಯುವಕ ತನ್ನ ಯಶೋಗಾಥೆ ಹಂಚಿಕೊಂಡಿದ್ದಾನೆ. ಒಂದು ಕಾರಿನಿಂದ ಆರಂಭಿಸಿದ ಕ್ಯಾಬ್ ವ್ಯವಹಾರ ಇಂದು ನಾಲ್ಕು ಕಾರುಗಳ ಮಟ್ಟಕ್ಕೆ ಬೆಳೆದಿದೆ. ಯಾವುದೇ ಉದ್ಯಮ ಆರಂಭದಲ್ಲಿ ಕಷ್ಟ ಇರುವುದು ಸಹಜ. ಆದರೆ ಧೈರ್ಯ ಕಳೆದುಕೊಳ್ಳಬಾರದು ಎಂದು ಆತ ಹೇಳಿದ್ದಾನೆ.
ರಿಸ್ಕ್ ತೆಗೆದುಕೊಂಡರೆ ಮಾತ್ರ ಯಶಸ್ಸು
ಸ್ವಂತ ವ್ಯವಹಾರ ಎಂದರೆ ಅಪಾಯ ಇರುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಆತ, ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವವರೇ ಮುಂದೆ ಸಾಗುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾನೆ. ಕೇವಲ ಸಂಬಳಕ್ಕಾಗಿ ಕೆಲಸ ಮಾಡುವುದಕ್ಕಿಂತ ಸ್ವಂತ ಉದ್ಯಮ ಕಟ್ಟಿಕೊಳ್ಳುವುದು ಉತ್ತಮ ಎಂದು ಹೇಳಿದ್ದಾನೆ.
ಇದನ್ನೂ ಓದಿ:
ತಿಂಗಳಿಗೆ ಎಷ್ಟು ಆದಾಯ?
ಪ್ರಸ್ತುತ ಆತನ ಬಳಿ ನಾಲ್ಕು ಕಾರುಗಳಿದ್ದು, ಅವುಗಳಲ್ಲಿ ಮೂರು ಕಾರುಗಳನ್ನು ಇತರ ಚಾಲಕರು ಓಡಿಸುತ್ತಿದ್ದಾರೆ. ಒಂದು ಕಾರನ್ನು ಆತನೇ ನಿರ್ವಹಿಸುತ್ತಾನೆ. ಸಾಲದ ಕಂತುಗಳು ಮತ್ತು ಇತರ ವೆಚ್ಚಗಳನ್ನು ಪಾವತಿಸಿದ ಬಳಿಕವೂ ತಿಂಗಳಿಗೆ ಸುಮಾರು 1.7 ಲಕ್ಷ ರೂಪಾಯಿ ಆದಾಯ ಉಳಿಯುತ್ತದೆ ಎಂದು ಯುವಕ ತಿಳಿಸಿದ್ದಾನೆ.
ವೈರಲ್ ಆದ ಯಶೋಗಾಥೆ
ಇಂಜಿನಿಯರ್ ಕೆಲಸವನ್ನು ಬಿಟ್ಟು ಕ್ಯಾಬ್ ಉದ್ಯಮಕ್ಕೆ ಇಳಿದ ಈ ಯುವಕನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅನೇಕರು ಆತನ ಧೈರ್ಯ, ಆತ್ಮವಿಶ್ವಾಸ ಹಾಗೂ ಉದ್ಯಮಶೀಲ ಮನೋಭಾವವನ್ನು ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ.



