ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವೊಂದು ರಾಷ್ಟ್ರಧ್ವಜದ ರಿಬ್ಬನ್ ಬಳಕೆಯ ವಿಚಾರ ವಿವಾದಕ್ಕೆ ಕಾರಣವಾಗಿದೆ. ಕಾರ್ಯಕ್ರಮದಲ್ಲಿ ರಿಬ್ಬನ್ ರೂಪದಲ್ಲಿ ರಾಷ್ಟ್ರಧ್ವಜ ಬಳಸಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅದನ್ನು ಕತ್ತರಿಸಲು ನಿರಾಕರಿಸಿದ ಘಟನೆ ಗಮನ ಸೆಳೆದಿದೆ.
ಸ್ಥಳೀಯ ಕರಕುಶಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಘಾಟನೆಗಾಗಿ ಸಾಮಾನ್ಯ ರಿಬ್ಬನ್ ಬದಲಿಗೆ ಅಶೋಕ ಚಕ್ರ ಸಮೇತ ರಾಷ್ಟ್ರಧ್ವಜವನ್ನು ಬಳಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ, ಅದನ್ನು ಕತ್ತರಿಸುವುದು ಸರಿಯಲ್ಲ ಎಂದು ಹೇಳಿ ತಕ್ಷಣವೇ ಆ ಕ್ರಮವನ್ನು ತಡೆದಿದ್ದಾರೆ.
ನಂತರ ರಿಬ್ಬನ್ ಅನ್ನು ಕತ್ತರಿಸುವ ಬದಲು ಬಿಚ್ಚುವಂತೆ ಸೂಚಿಸಿದ ಅವರು, ಸ್ವತಃ ಅದನ್ನು ಬಿಚ್ಚಿ ಗೌರವಯುತವಾಗಿ ಮಡಚಿ ಆಯೋಜಕರಿಗೆ ಹಸ್ತಾಂತರಿಸಿದರು. ರಾಷ್ಟ್ರಧ್ವಜಕ್ಕೆ ತಕ್ಕ ಗೌರವ ನೀಡಬೇಕು ಎಂದು ಅವರು ಸ್ಥಳದಲ್ಲೇ ಸೂಚನೆ ನೀಡಿದರು.
ಇದನ್ನೂ ಓದಿ:
ಈ ಘಟನೆ ರಾಜಕೀಯ ಪ್ರತಿಕ್ರಿಯೆಗಳಿಗೂ ಕಾರಣವಾಗಿದೆ. ಜಮ್ಮು ಮತ್ತು ಕಾಶ್ಮೀರ ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್, ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ರಿಬ್ಬನ್ ರೂಪದಲ್ಲಿ ಬಳಸಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ದೇಶದ ಧ್ವಜದ ಗೌರವ ಕಾಪಾಡುವಲ್ಲಿ ಆಯೋಜಕರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಅವರು ಆರೋಪಿಸಿದರು.
ಆದರೆ ಇದೇ ವೇಳೆ ಸಿಎಂ ಓಮರ್ ಅಬ್ದುಲ್ಲಾ ಅವರ ನಡೆಗೆ ಪ್ರಶಂಸೆ ವ್ಯಕ್ತಪಡಿಸಿದ ಬಿಜೆಪಿ, ರಾಷ್ಟ್ರಧ್ವಜದ ಗೌರವ ಉಳಿಸುವ ಮೂಲಕ ಅವರು ಸರಿಯಾದ ಸಂದೇಶ ನೀಡಿದ್ದಾರೆ ಎಂದು ಹೇಳಿದೆ. ಈ ಘಟನೆ ಹಿನ್ನಲೆಯಲ್ಲಿ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಕೂಡ ಕೇಳಿಬಂದಿದೆ.



