ಟಿ 20 ವಿಶ್ವಕಪ್‌ ಬಳಿಕ ಕೊಹ್ಲಿ ನಿವೃತ್ತಿ? ಶಾಕಿಂಗ್‌ ಹೇಳಿಕೆ ನೀಡಿದ ಮಾಜಿ ಆಟಗಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ವಿರಾಟ್ ಕೊಹ್ಲಿ ಆಧುನಿಕ ಪೀಳಿಗೆಯ ಅತ್ಯುತ್ತಮ ಬ್ಯಾಟರ್ ಎಂದು ಹೇಳಬಹುದು ಆದರೆ ಇತ್ತೀಚಿನ ದಿನಗಳಲ್ಲಿ ಅವರು ತಮ್ಮ ಫಾರ್ಮ್ ಕೊರತೆಯಿಂದ ಸಾಕಷ್ಟು ಸಮಸ್ಯೆಯನ್ನು ಎದುರಿಸಿದ್ದರು. ಅದಾಗ್ಯೂ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯಾಕಪ್‌ನಲ್ಲಿ, ಅಫ್ಘಾನಿಸ್ತಾನ ವಿರುದ್ಧ ಕೊಹ್ಲಿ ತಮ್ಮ ಬಹುನಿರೀಕ್ಷಿತ 71ನೇ ಅಂತಾರಾಷ್ಟ್ರೀಯ ಶತಕವನ್ನು ಸಿಡಿಸಿ ಆತ್ಮವಿಶ್ವಾಸವನ್ನು ಮರಳಿ ಪಡೆದಿದ್ದಾರೆ. ಟಿ 20 ವಿಶ್ವಕಪ್‌ ಸಹ ಹತ್ತಿರದಲ್ಲೇ ಇದೆ, ಮತ್ತೊಮ್ಮೆ ಕೊಹ್ಲಿ ವೈಭವ ಕಾಣಲಿದ್ದೇವೆ ಎಂದು ಫ್ಯಾನ್ಸ್‌ ಯೋಚಿಸುತ್ತಿರುವಾಗಲೇ ಪಾಕ್‌ ಮಾಜಿ ವೇಗಿ ಶೋಯಬ್‌ ಅಖ್ತರ್‌ ಶಾಕಿಂಗ್‌ ಹೇಳಿಕೆಯೊಂದನ್ನು ನೀಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ ಬಳಿಕ ಕೊಹ್ಲಿ ಟಿ 20 ಮಾದರಿಯಿಂದ ನಿವೃತ್ತಿ ಪಡೆಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಇಂಡಿಯಾ ಡಾಟ್‌ ಕಾಂ ಆಯೋಜಿಸಿದ ಲೈವ್ ಸೆಷನ್‌ನಲ್ಲಿ, ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಹೀಗೆ ಅಭಿಪ್ರಾಯಪಟ್ಟಿದ್ದಾರೆ. 104 ಟಿ 20 ಪಂದ್ಯಗಳನ್ನು ಆಡಿರುವ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ ಬಳಿಕ ನಿವೃತ್ತಿಯಾಗಬಹುದು. ಇತರ ಸ್ವರೂಪಗಳಲ್ಲಿ ಹೆಚ್ಚಿನ ಕಾಳ ಆಡಲು ಅವರು ಈ ನಿರ್ಧಾರಕ್ಕೆ ಬರುಬಹುದು. ನಾನು ಕೊಹ್ಲಿ ಸ್ಥಾನದಲ್ಲಿದ್ದರೆ ಅಂತಹದ್ದೇ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ ಎಂದು ಶೋಯೆಬ್ ಹೇಳಿದ್ದಾರೆ. ಆಸ್ಟ್ರೇಲಿಯಾದ ವಿಕೆಟ್‌ಗಳಲ್ಲಿ ಸಾಕಷ್ಟು ಅನುಭವ ಹೊಂದಿರುವ ಕೊಹ್ಲಿ ಮುಂಬರುವ T20 ವಿಶ್ವಕಪ್‌ ನಲ್ಲಿ ಭಾರತದ ಪ್ರಮುಖ ಅಸ್ತ್ರವಾಗಲಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಏತನ್ಮಧ್ಯೆ, ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ 23 ರನ್‌ಗಳಿಂದ ಶ್ರೀಲಂಕಾ ವಿರುದ್ಧ ಸೋತಿದ್ದಕ್ಕೆ ಆಖ್ತರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊಹಮ್ಮದ್ ರಿಜ್ವಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ನಾವು ಪದೇ ಪದೇ ತಪ್ಪಾದ ತಂಡದೊಂದಿಗೆ ಆಡುತ್ತಿದ್ದೇವೆಯೇ? ಮೊಹಮ್ಮದ್ ರಿಜ್ವಾನ್ ಮೇಲೆ ಪ್ರಶ್ನಾರ್ಥಕ ಚಿಹ್ನೆಗಳು ಮೂಡುತ್ತಿವೆ. ಏಕೆಂದರೆ ಅವನಿಗೆ ಆಟವನ್ನು ಮುಗಿಸಲು ಸಾಧ್ಯವಿಲ್ಲ, ಆತನಿಗೆ ಇತರರಿಂದ ಬೆಂಬಲ ಬೇಕು. ಅವರು ರನ್-ಎ-ಬಾಲ್ ಇನ್ನಿಂಗ್ಸ್ ಆಡಿಯೂ ಪಂದ್ಯವನ್ನು ಮುಗಿಸಲು ಸಾಧ್ಯವಾಗದಿದ್ದರೆ, ಅದು ಸಮಸ್ಯೆಯಾಗಲಿದೆ. ಹಾಗಾಗಿ ಪಾಕಿಸ್ತಾನವು ಕೆಟ್ಟ ಕ್ರಿಕೆಟ್ ಆಡಿದೆ ಎಂದು ನಾನು ಭಾವಿಸುತ್ತೇನೆ, ಟಾಸ್ ಗೆದ್ದ ನಂತರ ಅವರು ಮೊದಲು ಬ್ಯಾಟಿಂಗ್ ಮಾಡಬೇಕಿತ್ತು. ಅವರ ಯೋಜನೆ ಏನು ಎಂದೇ ನನಗೆ ತಿಳಿಯಲಿಲ್ಲ ”ಎಂದು ಅಖ್ತರ್‌ ಬೇಸರ ಹೊರಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!