ರೈತರು, ಎಸ್ಸಿ, ಎಸ್ಟಿ ಸೇರಿದಂತೆ ಎಲ್ಲ ವರ್ಗದವರ ಏಳಿಗೆಗಾಗಿ ದೂರದೃಷ್ಟಿಯ ಆಯವ್ಯಯ ಮಂಡನೆ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ,ಹಾವೇರಿ :

ಪ್ರಸಕ್ತ ಮಂಡನೆ ಮಾಡಿರುವ ಆಯವ್ಯಯದಲ್ಲಿ ರೈತರಿಗಾಗಿ ಕಾರ್ಯಕ್ರಮಗಳನ್ನು ನೀಡಲಾಗಿದೆ. ಸಾಲದ ವಿಸ್ತರಣೆ, ರೈತರಿಗೆ ಪ್ರಥಮ ಬಾರಿ ಜೀವನಜ್ಯೋತಿ ಜೀವ ವಿಮೆ ಮಾಡುವುದಕ್ಕೆ ಆಯವ್ಯಯದಲ್ಲಿ ೧೮೦ ಕೋಟಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಜಿಲ್ಲೆಯ ಶಿಗ್ಗಾಂವ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಶಿವಾಜಿ ಮಹಾರಾಜರ ೩೯೬ನೇ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ರೈತರು, ಎಸ್ಸಿ, ಎಸ್ಟಿ ಸೇರಿದಂತೆ ಎಲ್ಲ ವರ್ಗದವರ ಏಳಿಗೆಗಾಗಿ ಯೋಜನೆಗಳನ್ನು ರೂಪಿಸಲಾಗಿದೆ. ಯಶಸ್ವಿನಿ ಯೋಜನೆ ಮರುಪ್ರಾರಂಭ, ಬೆಲೆ ಕುಸಿತವಾದಾಗ ರೈತರಿಗೆ ಅನುಕೂಲವಾಗಲು ಆವರ್ತ ನಿಧಿ, ಸಿರಿಧಾನ್ಯ ಬೆಳೆಗಾರರನ್ನು ಪ್ರೋತ್ಸಾಹಿಸಲು ವರ್ಷಕ್ಕಾಗಿ ಒಂದು ಹೆಕ್ಟೇರಿಗೆ ೧೦ ಸಾವಿರ ಪ್ರೋತ್ಸಾಹ ಧನ ನೀಡಲಾಗಿದೆ ಎಂದರು.
ಪಿಯುಸಿ, ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯ್ತಿ, ಶಾಲಾ ವಿದ್ಯಾರ್ಥಿಗಳಿಗೆ ಬಸ್ ಪ್ರಸಕ್ತ ೧ ಸಾವಿರ ಬಸ್ ಬಿಡಲಾಗುವುದು ಇದನ್ನು ೨ ಸಾವಿರ ಬಸ್ ಬಿಡುವ ವ್ಯವಸ್ಥೆ ಮಾಡಲಾಗುವುದು, ಹೆಣ್ಣುಮಕ್ಕಳಿಗೆ ಉಚಿತ ಬಸ್ ಪಾಸ್, ಯುವಕರಿಗೆ ತರಬೇತಿ ನೀಡುವ ಕಾರ್ಯಕ್ರಮಗಳು ದೂರದೃಷ್ಟಿಯ ಕಾರ್ಯಕ್ರಮಗಳಾಗಿವೆ. ತಳಹಂತದ, ಅವಕಾಶ ವಂಚಿತರ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಸರ್ಕಾರದ ಕಾರ್ಯಕ್ರಮಗಳ ಮೂಲಕ ನೆರವು ನೀಡಲಾಗುತ್ತಿದೆ. ಜನಪರವಾದ ಬಜೆಟ್ ಹಾಗೂ ದುಡಿಯುವ ವರ್ಗದ ಕೈಬಲಪಡಿಸುವ ಬಜೆಟ್. ರಾಜ್ಯ ಹಾಗೂ ಈ ಕ್ಷೇತ್ರ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುವುದಾಗಿ ಹೇಳಿದರು.
ಕನ್ನಡದ ಮಣ್ಣಿನಲ್ಲಿರುವವರೆಲ್ಲರೂ ಕನ್ನಡಿಗರು
ಕರ್ನಾಟಕದಲ್ಲಿ ಎಲ್ಲ ವರ್ಗ, ಭಾಷಿಕರು ಹಾಗೂ ಸಮುದಾಯಗಳನ್ನು ಸಮನಾಗಿ ನೋಡುವ ಪರಂಪರೆ ಮೊದಲಿನಿಂದಲೂ ಬಂದಿದೆ. ಆದರೆ ಕನ್ನಡಕ್ಕೆ ಮೊದಲ ಸ್ಥಾನ, ಕನ್ನಡಿಗರಿಗೆ ಮೊದಲ ಸ್ಥಾನ. ಕನ್ನಡದ ಮಣ್ಣಿನಲ್ಲಿರುವವರೆಲ್ಲರೂ ಕನ್ನಡಿಗರು. ಇದು ನಮ್ಮ ಧ್ಯೇಯ, ಎಲ್ಲರನ್ನೂ ಒಳಗೊಳ್ಳುವುದು ನಮ್ಮ ಮೂಲಮಂತ್ರ. ಸಮಾಜದ ಎಲ್ಲಾ ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿ ಯೋಜನೆಗಳು ಮುಟ್ಟಬೇಕೆಂಬ ಕಾರಣದಿಂದ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದರು.
ಶಿಗ್ಗಾವಿ ವಿರಕ್ತ ಮಠದ ಸಂಘ ಬಸವ ಮಹಾಸ್ವಾಮಿಗಳು, ಕಾಳೆಭಾವನ ಮಠದ ಚಂದ್ರಪ್ಪಜ್ಜನವರು, ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಪುರಸಭೆ ಸದಸ್ಯ ಸುಭಾಷ್ ಚೌಹಾಣ್, ಅಭಿವೃದ್ಧಿ ಮಂಡಳಿ ಸದಸ್ಯ ಪ್ರಭು, ಕರ್ನಾಟಕ ಕ್ಷತ್ರೀಯ ಒಕ್ಕೂಟದ ಅಧ್ಯಕ್ಷ ಉದಯಸಿಂಗ್, ಶ್ರೀಕಾಂತ್ ದುಡ್ಡೀಗೌಡ, ಮಲ್ಲಿಕಾರ್ಜುನ ಬಾಳಿಕಾಯಿ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!