ಹೊಸದಿಗಂತ ವರದಿ,ಹುಬ್ಬಳ್ಳಿ:
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೊಸದಿಗಂತ ದಿನ ಪತ್ರಿಕೆ ತನ್ನದೇ ವಿಶಿಷ್ಟತೆ ಹೊಂದಿದ್ದು, ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ಜೆ.ಎಮ್. ಚಂದೂನವರ ಹೇಳಿದರು.
ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆ ಅಂಗವಾಗಿ ಗುರುವಾರ ಹೊಸದಿಗಂತ ಹುಬ್ಬಳ್ಳಿ ಆವೃತ್ತಿ ಕಚೇರಿಗೆ ಭೇಟಿ ನೀಡಿ ಅವರು ಮಾತನಾಡಿದರು.
ಹೊಸದಿಗಂತ ಪತ್ರಿಕೆಯಲ್ಲಿ ಓದುಗರಿಗೆ ಉತ್ತರ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಸಮಗ್ರ ಮಾಹಿತಿ ಲಭ್ಯವಿರುತ್ತದೆ. ಇಲ್ಲಿನ ಪರಿಣಾಮಕಾರಿ ವರದಿಗಳು, ಆಕರ್ಷಕ ವಿನ್ಯಾಸ, ಸಂಪಾದಕೀಯ ಹಾಗೂ ದೇಶ-ವಿದೇಶ ಪುಟಗಳಲ್ಲಿನ ಹೊಸ ವಿಷಯಗಳ ಜ್ಞಾನ ಜೊತೆಗೆ ಪ್ರತಿಭಾನ್ವಿತ ಪತ್ರಿಕೋದ್ಯಮ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ವೇದಿಕೆ ಈ ಪತ್ರಿಕೆಯಾಗಿದೆ ಎಂದರು.
ಸಣ್ಣ ಪತ್ರಿಕೆಯಿಂದ ಆರಂಭವಾಗಿ ಇಂದು ರಾಜ್ಯ ಮಟ್ಟದವರೆಗೂ ವಿಶಾಲವಾಗಿ ಬೆಳೆದು ನಿಂತ ಹೊಸದಿಗಂತದ ಹಾದಿ ಪ್ರೇರಣಾದಾಯಕ ಎಂದು ಹೇಳಿದರು.
ಇದಕ್ಕೂ ಪೂರ್ವದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಪತ್ರಿಕಾ ಕಚೇರಿಯ ಕಾರ್ಯವಿಭಾಗಗಳನ್ನು ವೀಕ್ಷಿಸಿ ಅದರ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದುಕೊಂಡರು.
ಪತ್ರಿಕೆಯ ಹುಬ್ಬಳ್ಳಿ ಶಾಖಾ ವ್ಯವಸ್ಥಾಪಕ ವಿಠ್ಠಲದಾಸ ಕಾಮತ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಹೊಸದಿಗಂತ ಪತ್ರಿಕೆಯ ಹುಟ್ಟು ಬೆಳವಣಿಗೆ, ಸದ್ಯದ ಕಾರ್ಯ ಸ್ಥಿತಿ, ಸುದ್ದಿ ಕಳಿಸುವುದರಿಂದ ಪತ್ರಿಕೆ ಮುದ್ರಣವಾಗುವವರೆಗಿನ ಸಂಪೂರ್ಣ ಪ್ರಕ್ರಿಯೆ, ಸುದ್ದಿ ಮೌಲ್ಯ, ವರದಿಗಾರ ಹಾಗೂ ಉಪಸಂಪಾದಕರ ಪಾತ್ರ ಹಾಗೂ ಜವಾಬ್ದಾರಿಗಳು, ಪತ್ರಿಕೆ ವಿನ್ಯಾಸದ ಶೈಲಿ, ಡಿಜಿಟಲ್ ಆವೃತ್ತಿಯ ಕೆಲಸಗಳು ಮುಂತಾದ ವಿಷಯಗಳ ಕುರಿತು ವಿವರಿಸಿದರು. ಜೊತೆಗೆ ಪತ್ರಿಕೋದ್ಯಮದ ಕುರಿತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರೊ. ಜೆ.ಎಮ್. ಚಂದೂನವರ ಅವರಿಗೆ ಪತ್ರಿಕೆ ಪರವಾಗಿ ಗೌರವ ಸಮರ್ಪಿಸಲಾಯಿತು.