‘ಒಳಚರಂಡಿ ಸಂಸ್ಕರಣಾ ಘಟಕ’ ಸ್ಥಳಕ್ಕೆ ಅಪ್ಪಚ್ಚು ರಂಜನ್ ಭೇಟಿ: ಪರಿಶೀಲನೆ

ಹೊಸದಿಗಂತ ವರದಿ,ಮಡಿಕೇರಿ:

ನಗರದ ಹೊರ ವಲಯದ ಗಾಲ್ಫ್ ಮೈದಾನದ ಬಳಿ ಗುರುತಿಸಲಾಗಿರುವ ‘ಒಳಚರಂಡಿ ಸಂಸ್ಕರಣಾ ಘಟಕ’ ಸ್ಥಳಕ್ಕೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಶುಕ್ರವಾರ ಭೇಟಿ ನೀಡಿ ವೀಕ್ಷಣೆ ಮಾಡಿದರು.
ನಗರದ ಒಳಚರಂಡಿ ಪೈಪ್‍ಲೈನ್ ಹಾದು ಹೋಗುವ ಮಾರ್ಗ ಹಾಗೂ ನಗರದ ಕೆಲವು ಕಡೆಗಳಲ್ಲಿ ಒಳಚರಂಡಿ ನಿರ್ಮಾಣಕ್ಕೆ ಇರುವ ತೊಂದರೆ ಮತ್ತಿತರ ಸಂಬಂಧ ನಕಾಶೆ ಮೂಲಕ ಅಧಿಕಾರಿಗಳಿಂದ ಶಾಸಕರು ಮಾಹಿತಿ ಪಡೆದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅಪ್ಪಚ್ಚು ರಂಜನ್ ಅವರು, ಒಟ್ಟು 109 ಕಿ.ಮೀ.ಉದ್ದದ ಒಳಚರಂಡಿ ಪೈಪ್ ಲೈನ್ ಮಾರ್ಗದಲ್ಲಿ 69 ಕಿ.ಮೀ ಪೈಪ್‍ಲೈನ್ ಒಳಚರಂಡಿ ಕಾರ್ಯ ಪೂರ್ಣಗೊಂಡಿದೆ. ಸದ್ಯ ಇನ್ನೂ 15 ಕಿ.ಮೀ. ಒಳಚರಂಡಿ ಪೈಪ್‍ಲೈನ್ ನಿರ್ಮಾಣ ಮಾಡಬೇಕಿದೆ. ಆ ದಿಸೆಯಲ್ಲಿ ಈ ಬಗ್ಗೆ ಸಂಬಂಧಪಟ್ಟವರ ಜೊತೆಗೆ ಚರ್ಚಿಸಿ ಅಗತ್ಯ ಕ್ರಮವಹಿಸುವಂತೆ ಎಂಜಿನಿಯರ್‌’ಗಳಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಒಟ್ಟು 49 ಕೋಟಿ ರೂ. ವೆಚ್ಚದ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸದ್ಯ 85 ಕಿ.ಮೀ. ಉದ್ದದ ಒಳಚರಂಡಿ ಪೈಪ್‍ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಾಗದ ತಕರಾರು ಮತ್ತಿತರವನ್ನು ಸರಿಪಡಿಸಿಕೊಂಡು ತ್ವರಿತವಾಗಿ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಸಂಬಂಧಪಟ್ಟ ಎಂಜಿನಿಯರ್‌ಗಳು, ಕಂದಾಯ, ನಗರಸಭೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕರು ತಿಳಿಸಿದರು.
ಒಳಚರಂಡಿ ಮಂಡಳಿಯ ಅಧೀಕ್ಷಕ ಎಂಜಿನಿಯರ್ ನಟರಾಜು ಅವರು ಮಾತನಾಡಿ, ಒಳಚರಂಡಿ ನಿರ್ಮಾಣ ಸಂಬಂಧಿಸಿದಂತೆ ಮಡಿಕೇರಿ ನಗರದಲ್ಲಿ ಮೂರು ವಲಯಗಳನ್ನಾಗಿ ಮಾಡಿ ವೆಟ್ ವೆಲ್ ನಿರ್ಮಿಸಿ ಒಳಚರಂಡಿಯ ನೀರು ಸರಾಗವಾಗಿ ಹರಿಯುವಂತೆ ಮಾಡಿ ಕ್ರಮವಹಿಸಲಾಗಿದೆ. ಜಾಗದ ತಕರಾರು ಸರಿಪಡಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದು ಹೇಳಿದರು.
ಎಲ್ಲರ ಸಹಕಾರದಿಂದ ಒಂದು ಅಥವಾ ಎರಡು ವರ್ಷದಲ್ಲಿ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ತಹಶೀಲ್ದಾರ್ ಪಿ.ಎಸ್.ಮಹೇಶ್, ಪೌರಾಯುಕ್ತ ಎಸ್.ವಿ.ರಾಮದಾಸ್, ಭೂ ದಾಖಲೆಗಳ ಸಹಾಯಕ ನಿರ್ದೇಶಕ ವಿರೂಪಾಕ್ಷ, ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿನಯ ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!