October 5, 2026
Monday, October 5, 2026
spot_img

Form 7ನಿಂದ ಮತದಾರರ ಹೆಸರು ಡಿಲೀಟ್ ಆಗಲ್ಲ: ಚುನಾವಣಾ ಆಯೋಗ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮತದಾರರ ಪಟ್ಟಿ ಪರಿಷ್ಕರಣೆ ವೇಳೆ Form 7 ಅರ್ಜಿಗಳ ಬಳಕೆಯ ಬಗ್ಗೆ ಕೇಳಿಬರುತ್ತಿರುವ ಆರೋಪಗಳಿಗೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ವಿಚಾರಣೆ ಬಳಿಕವೇ ಅಂತಿಮ ನಿರ್ಧಾರ

Form 7 ಸಲ್ಲಿಕೆಯಾದ ತಕ್ಷಣ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗುವುದಿಲ್ಲ. ಅರ್ಜಿಯ ಆಧಾರದಲ್ಲಿ ಸಂಬಂಧಪಟ್ಟ ಮತದಾರರಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಿದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಇದುವರೆಗೆ 91,278 Form 7 ಅರ್ಜಿಗಳು ಬಂದಿದ್ದರೂ, ಅವುಗಳ ಆಧಾರದ ಮೇಲೆ ಯಾವುದೇ ಮತದಾರರ ಹೆಸರನ್ನು ಇನ್ನೂ ಅಳಿಸಲಾಗಿಲ್ಲ ಎಂದು ಅವರು ತಿಳಿಸಿದರು. SIR ಪ್ರಕ್ರಿಯೆ ಕುರಿತು ಗೊಂದಲ ಮತ್ತು ಆತಂಕದ ನಡುವೆ ಚುನಾವಣಾ ಆಯೋಗ ನೀಡಿರುವ ಈ ಸ್ಪಷ್ಟನೆ ಮಹತ್ವ ಪಡೆದಿದೆ.

SIR ಪ್ರಕ್ರಿಯೆಯಡಿ ಒಟ್ಟು 43,82,313 ಪ್ರಕರಣಗಳಲ್ಲಿ 43,55,818 ಮಂದಿಗೆ ನೋಟಿಸ್ ನೀಡಲಾಗಿದೆ. ಇನ್ನೂ 26,495 ನೋಟಿಸ್‌ಗಳನ್ನು ನೀಡಬೇಕಿದ್ದು, ಈಗಾಗಲೇ ನೀಡಿರುವ ನೋಟಿಸ್‌ಗಳ ಪೈಕಿ 36,89,063 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ. ಉಳಿದ 6,66,755 ಪ್ರಕರಣಗಳ ಪರಿಶೀಲನೆ ಮುಂದುವರಿದಿದೆ. ಬೂತ್ ಮಟ್ಟದ ಅಧಿಕಾರಿಗಳು ಮನೆಮನೆಗೆ ತೆರಳಿ ವಿಚಾರಣೆ ನಡೆಸುತ್ತಿದ್ದು, ಅಕ್ಟೋಬರ್ 12ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಇದನ್ನೂ ಓದಿ:

ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ

ಇದೇ ವೇಳೆ ರಾಜ್ಯದಲ್ಲಿ 9,10,732 Form 6 ಅರ್ಜಿಗಳು ಸ್ವೀಕರಿಸಲಾಗಿದ್ದು, ಹೊಸ ಮತದಾರರ ನೋಂದಣಿ ಹಾಗೂ ವಿಳಾಸ ಬದಲಾವಣೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಕ್ಟೋಬರ್ 27ರಂದು ಅಂತಿಮ ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಬಳಿಕ ನೋಂದಾಯಿತ ರಾಜಕೀಯ ಪಕ್ಷಗಳಿಗೆ ಮುದ್ರಿತ ಹಾಗೂ ಡಿಜಿಟಲ್ ಪ್ರತಿಗಳನ್ನು ನೀಡಲಾಗುತ್ತದೆ.

ಅಕ್ಟೋಬರ್ 22ರ ನಂತರ ವಿಶೇಷ ಅಭಿಯಾನ

ಅಕ್ಟೋಬರ್ 22ರ ನಂತರ ಮತ್ತೊಂದು ವಿಶೇಷ ಅಭಿಯಾನ ನಡೆಸಲು ಚುನಾವಣಾ ಆಯೋಗ ಸೂಚಿಸಿದ್ದು, ಪಟ್ಟಿಯಲ್ಲಿ ಹೆಸರು ಕೈತಪ್ಪಿರುವ ಅರ್ಹ ಮತದಾರರು Form 6 ಮೂಲಕ ನೋಂದಾಯಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರಸ್ತುತ SIR ಬಳಿಕ ರಾಜ್ಯದ ಒಟ್ಟು ಮತದಾರರ ಸಂಖ್ಯೆ 4,50,29,916ಕ್ಕೆ ಏರಿಕೆಯಾಗಿದೆ. ಇವರಲ್ಲಿ 2,23,41,784 ಪುರುಷರು ಹಾಗೂ 2,26,85,269 ಮಹಿಳಾ ಮತದಾರರು ಇದ್ದಾರೆ.

Must Read