ಮತದಾನ ಬಹಿಷ್ಕಾರದ ಬಿಸಿ: ನಾಗಾಲ್ಯಾಂಡ್​ನ ಆರು ಜಿಲ್ಲೆಗಳಲ್ಲಿ ೦% ವೋಟಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆದಿದ್ದು, ಇತ್ತ ನಾಗಾಲ್ಯಾಂಡ್ ರಾಜ್ಯದ ಪೂರ್ವಭಾಗದ ಆರು ಜಿಲ್ಲೆಗಳಲ್ಲಿ (6 eastern nagaland districts) ಬಹುತೇಕ ಶೂನ್ಯ ಮತದಾನವಾಗಿದೆ.

ಇಲ್ಲಿನ ಸಾರ್ವಜನಿಕರು ಪ್ರತ್ಯೇಕ ಪ್ರದೇಶವನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಮತದಾನ ಬಹಿಷ್ಕರಿಸಿದ್ದಾರೆ .

ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ (ಇಎನ್​ಪಿಒ) ಇಂದು ಶುಕ್ರವಾರ ‘ಪಬ್ಲಿಕ್ ಎಮರ್ಜೆನ್ಸಿ’ ಘೋಷಣೆ ಮಾಡಿ, ಚುನಾವಣೆಯನ್ನು ಬಾಯ್ಕಾಟ್ ಮಾಡುವಂತೆ ಸಾರ್ವಜನಿಕರಿಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬಹುತೇಕ ಇಲ್ಲಿ ಮತದಾನ ಆಗಿಲ್ಲ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್​ನ ಮುಖ್ಯ ಚುನಾವಣಾಧಿಕಾರಿಯಿಂದ ಇಎನ್​ಪಿಒಗೆ ಶೋಕಾಸ್ ನೊಟೀಸ್ ಜಾರಿ ಮಾಡಿದೆ.

ಇಎನ್​ಪಿಒ ಸಂಘಟನೆಯು ಚುನಾವಣೆಯಲ್ಲಿ ಪ್ರಭಾವ ಬೀರಲು ಪ್ರಯತ್ನಿಸಿದೆ. ಪೂರ್ವ ನಾಗಾಲ್ಯಾಂಡ್​ನ ನಿವಾಸಿಗಳು ಸಾರ್ವತ್ರಿಕ ಚುನಾವಣೆಯಲ್ಲಿ ಮುಕ್ತವಾಗಿ ಪಾಲ್ಗೊಳ್ಳಲು ಅಡಚಣೆ ಮಾಡಿದೆ. ಹೀಗಾಗಿ ಐಪಿಸಿ ಸೆಕ್ಷನ್ 171ಸಿ ಸಬ್​ಸೆಕ್ಷನ್ ಅಡಿಯಲ್ಲಿ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿ ಚುನಾವಣಾ ಅಧಿಕಾರಿ ಶೋಕಾಸ್ ನೊಟೀಸ್ ನೀಡಿದ್ದಾರೆ.

ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ ಹೇಳುವಂತೆ , ಪೂರ್ವ ನಾಗಾಲ್ಯಾಂಡ್ ಪ್ರದೇಶ ನಮ್ಮ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಸಮಾಜ ಘಾತುಕ ಶಕ್ತಿಗಳು ಸೇರಿ ಹಿಂಸಾಚಾರ ಆಗುವ ಸಾಧ್ಯತೆ ಇತ್ತು. ಅದನ್ನು ನಿಯಂತ್ರಿಸಲು ಪಬ್ಲಿಕ್ ಎಮರ್ಜೆನ್ಸಿ ಎಂದು ಅಧಿಸೂಚನೆ ತರಲಾಯಿತು. ಸಂಬಂಧಿತ ಜನರು ಮತ್ತು ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ಎಮರ್ಜೆನ್ಸಿ ಘೋಷಿಸಲಾಗಿದೆ. ಇದು ಜನರೇ ಸ್ವಯಿಚ್ಛೆಯಿಂದ ಕೈಗೊಂಡ ನಿರ್ಧಾರ. ಚುನಾವಣೆಯ ಕಾರ್ಯಗಳಿಗೆ ತಡೆ ತರುವ ಪ್ರಯತ್ನ ಅಲ್ಲ ಇದು. ಹೀಗಾಗಿ, ಸೆಕ್ಷನ್ 171ಸಿ ನಿಯಮ ಇದಕ್ಕೆ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ನಾಗಾಲ್ಯಾಂಡ್ ರಾಜ್ಯದಲ್ಲಿ ಇಂದು ಮತದಾನ ಆಗಿದೆ. ಇಡೀ ಜಿಲ್ಲೆಗೆ ಒಂದೇ ಲೋಕಸಭಾ ಕ್ಷೇತ್ರ ಇದೆ. ಮತದಾರರ ಸಂಖ್ಯೆ 11 ಲಕ್ಷಕ್ಕಿಂತ ತುಸು ಹೆಚ್ಚು. ಈ ರಾಜ್ಯದಲ್ಲಿ ಒಟ್ಟು 16 ಜಿಲ್ಲೆಗಳು ಇಲ್ಲಿದ್ದು, 60 ವಿಧಾನಸಭಾ ಕ್ಷೇತ್ರಗಳಿವೆ. ನ್ಯಾಷನಲ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ 2019ರ ಚುನಾವಣೆಯಲ್ಲಿ ಜಯಿಸಿತ್ತು. ಈ ಬಾರಿ ಎನ್​ಡಿಪಿಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ.

ನಾಗಾಲ್ಯಾಂಡ್​ನ 16 ಜಿಲ್ಲೆಗಳಲ್ಲಿ ಪೂರ್ವ ಭಾಗದ 6 ಜಿಲ್ಲೆಗಳು ಹೆಚ್ಚಿನ ಸ್ವಾಯತ್ತತೆ ಮತ್ತು ಪ್ರತ್ಯೇಕ ಭಾಗಕ್ಕೆ ಒತ್ತಾಯಿಸುತ್ತಿವೆ. ಇಲ್ಲಿ 20 ಶಾಸಕರಿದ್ದಾರೆ. ಮಾರ್ಚ್ 30ರಂದು ಇಎನ್​ಪಿಒ ಸಂಘಟನೆ ಈ 20 ಶಾಸಕರು ಹಾಗೂ ಇತರ ಸಂಘಟನೆಗಳೊಂದಿಗೆ ಸುದೀರ್ಘ ಸಭೆ ನಡೆಸಿ ಚರ್ಚಿಸಿ, ಬಳಿಕ ಮತದಾನ ಬಹಿಷ್ಕಾರಕ್ಕೆ ಕರೆಕೊಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!