ಕೋಮುಗಲಭೆ ನಡೆದ ಕ್ಷೇತ್ರಗಳಲ್ಲಿ ಮತದಾನಕ್ಕೆ ಅವಕಾಶ ನೀಡಲ್ಲ: ಕಲ್ಕತ್ತಾ ಹೈಕೋರ್ಟ್‌ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಮನವಮಿ ಆಚರಣೆ ವೇಳೆ ಕೋಮುಗಲಭೆ ನಡೆದ ಪಶ್ಚಿಮ ಬಂಗಾಳದ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಎಚ್ಚರಿಕೆ ನೀಡಿದೆ.

ಏಪ್ರಿಲ್ 17 ರಂದು ಮುರ್ಷಿದಾಬಾದ್‌ನಲ್ಲಿ ರಾಮನವಮಿ ಮೆರವಣಿಗೆ ಸಂದರ್ಭ ಹಿಂಸಾಚಾರದ ನಡೆದಿತ್ತು. ಈ ಕುರಿತು ವಿಚಾರಣೆಯ ಸಂದರ್ಭ ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ನೇತೃತ್ವದ ಪೀಠವು , ಜನರು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಲು ಸಾಧ್ಯವಾಗದಿದ್ದರೆ, ಈ ಜಿಲ್ಲೆಗಳಲ್ಲಿ ಚುನಾವಣಾ ಆಯೋಗವು ಸಂಸತ್ತಿನ ಚುನಾವಣೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ನಾವು ಹೇಳುತ್ತೇವೆ. ಮುಂದೆ ಇರೋದು ಅದೊಂದೇ ದಾರಿ ಎಂದು ಹೇಳಿದೆ.

ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದರೂ, ಎರಡು ಗುಂಪಿನ ಜನರು ಈ ರೀತಿ ಜಗಳವಾಡುತ್ತಿದ್ದರೆ, ಅವರು ಯಾವುದೇ ಚುನಾಯಿತ ಪ್ರತಿನಿಧಿಗಳಿಗೆ ಅರ್ಹರಲ್ಲ . ರಾಮನವಮಿಯಂದು ಕೋಲ್ಕತ್ತಾದಲ್ಲಿ ಇದೇ ರೀತಿಯ ಮೆರವಣಿಗೆಗಳು ನಡೆದಿವೆ, ಆದರೆ ಅಲ್ಲಿ ಯಾವುದೇ ಹಿಂಸಾಚಾರ ವರದಿಯಾಗಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಕೋಲ್ಕತ್ತಾದಲ್ಲಿಯೂ 23 ಕಡೆಗಳಲ್ಲಿ ಸಂಭ್ರಮಾಚರಣೆ ನಡೆದಿದೆ ಆದರೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಎಂಸಿಸಿ ಇರುವಾಗ ರಾಜ್ಯ ಪೊಲೀಸರು ಏನು ಮಾಡ್ತಿದ್ದಾರೆ? ಕೇಂದ್ರ ಪಡೆಗಳು ಏನು ಮಾಡುತ್ತಿವೆ? ಎರಡೂ ಘರ್ಷಣೆಗಳನ್ನು ತಡೆಯಲು ಅವರಿಗೆ ಏಕೆ ಸಾಧ್ಯವಾಗಲಿಲ್ಲ ಪೀಠ ಪ್ರಶ್ನೆ ಮಾಡಿದೆ.

ಆ ವೇಳೆ ಹಿಂಸಾಚಾರ ಸಂಬಂಧಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಷ್ಟು ಜನರನ್ನು ಬಂಧಿಸಲಾಗಿದೆ ಎಂದು ಪೀಠವು ರಾಜ್ಯದ ವಕೀಲರನ್ನು ಪ್ರಶ್ನೆ ಮಾಡಿದೆ. ಇದೀಗ ಪ್ರಕರಣದ ತನಿಖೆಯನ್ನು ಸಿಐಡಿವಹಿಸಿಕೊಂಡಿದೆ ಎಂದು ರಾಜ್ಯದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಶಾಂತಿಯುತವಾಗಿ ಆಚರಿಸಲು ಸಾಧ್ಯವಾಗದ ಜನರಿಗೆ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು ನಾವು ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡುತ್ತೇವೆ ಎಂದು ಪೀಠವು ಉತ್ತರಿಸಿದೆ.

ಯಾವುದೇ ಸ್ಥಾನದ ಚುನಾವಣೆಯನ್ನು ಮುಂದೂಡುವ ಕುರಿತು ಹೈಕೋರ್ಟ್ ಯಾವುದೇ ಆದೇಶವನ್ನು ನೀಡದಿದ್ದರೂ, ಮುರ್ಷಿದಾಬಾದ್ ವ್ಯಾಪ್ತಿಯಲ್ಲಿ ಬರುವ ಬರ್ಹಾಂಪೋರ್‌ನಲ್ಲಿ ಚುನಾವಣೆಯನ್ನು ಮುಂದೂಡಬೇಕೆಂದು ಚುನಾವಣಾ ಆಯೋಗಕ್ಕೆ ಪ್ರಸ್ತಾಪಿಸುವುದಾಗಿ ಹೇಳಿದೆ.

ಕೋಮು ಘರ್ಷಣೆಯ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ. ಮುಂದಿನ ವಿಚಾರಣೆ ಶುಕ್ರವಾರ, ಏಪ್ರಿಲ್ 26 ರಂದು ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!