ಹೊಸದಿಗಂತ ವರದಿ,ಹಾವೇರಿ:
ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಮೇಕೆದಾಟುವಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡಲಿದ್ದೇವೆ. ಪಕ್ಷಾತೀತವಾದ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ, ವಿ.ಪ ಸದಸ್ಯ ಸಲೀಂ ಅಹ್ಮದ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಹೋರಾಟದಲ್ಲಿ ಸಾಹಿತಿಗಳು ಹಾಗೂ ಚಲನ ಚಿತ್ರ ಕಲಾವಿದರೂ ಭಾಗಿ ಆಗುವಂತೆ ಕೇಳಿಕೊಳ್ಳಲಾಗಿದೆ ಎಂದರು.
ಮೇಕೆದಾಟು ಹೋರಾಟದ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ನಡುವೆ ಯಾವುದೇ ಗೊಂದಲ ಇಲ್ಲ. ಅಸೆಂಬ್ಲಿ ನಡೆಯುವಾಗ ನಾನು ಇರಲ್ಲ. ಬೇರೆ ದಿನಾಂಕ ನಿಗದಿಗೊಳಿಸುವಂತೆ ಸಿದ್ದರಾಮಯ್ಯ ಹೇಳಿದ್ದರು ಹೀಗಾಗಿ ಡಿಕೆಶಿ ನಡೆಸಿದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಮೈಸೂರಿನಲ್ಲಿ ಒಟ್ಟಾಗೇ ಇಬ್ಬರೂ ಪೂರ್ವಭಾವಿ ಸಭೆ ಹಮ್ಮಿಕೊಂಡಿದ್ದಾರೆ. ಈ ಯೋಜನೆಗೆ ಕೇಂದ್ರ ಸರ್ಕಾರ ಬೇಗನೆ ಅನುಮತಿಯನ್ನು ನೀಡಬೇಕು ಎಂದು ತಿಳಿಸಿದರು.
ಹಿಂದು ದೇವಾಲಯಗಳನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಕ್ಕೆ ಕಾಂಗ್ರೆಸ್ ಏಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂಬ ಪ್ರಶ್ನೆಗೆ, ಈ ಕುರಿತು ಇಗಾಗಲೇ ಕೆಪಿಸಿಸಿ ಅಧ್ಯಕ್ಷರು ಪ್ರತಿಕ್ರೀಯೆ ನೀಡಿದ್ದಾರೆ ಎಂದಷ್ಟೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ಮಾಜಿ ಸಚಿವ ರುದ್ರಪ್ಪ ಲಮಾಣಿ, ನಾಗರಾಜ ಛಬ್ಬಿ, ಡಾ. ಸಂಜಯ ಡಾಂಗೆ, ಶಿವಕುಮಾರಗೌಡ ಪಾಟೀಲ, ಡಿ.ಬಸವರಾಜ ಇತರರಿದ್ದರು.