Monday, December 11, 2023

Latest Posts

ದಸರಾದಲ್ಲಿ ನಡಿಗೆ ಮೂಲಕ ಪಾರಂಪರಿಕ ಕಟ್ಟಡಗಳ ದರ್ಶನ

ಹೊಸದಿಗಂತ ವರದಿ ಮೈಸೂರು:

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ, ಜನಸಾಮನ್ಯರಿಗೆ ಹಾಗೂ ಪ್ರವಾಸಿಗರಿಗೆ ಮೈಸೂರಿನ ಇತಿಹಾಸ, ಪಾರಂಪರಿಕ ಕಟ್ಟಡಗಳ ಹಿನ್ನೆಲೆ, ಪ್ರಾಮುಖ್ಯತೆ ಬಗ್ಗೆ ತಿಳಿಸಿಲು ಶನಿವಾರ ರಂಗಚಾರ್ಲುಭವನದಲ್ಲಿ (ಟೌನ್ ಹಾಲ್) ಆಯೋಜಿಸಿದ್ದ ಪಾರಂಪರಿಕ ನಡಿಗೆ ಕಾರ್ಯಕ್ರಮ ಶನಿವಾರ ಬೆಳಗ್ಗೆ ನಡೆಯಿತು.

ಈ ವೇಳೆ ಮಾತನಾಡಿದ ಪುರಾತತ್ವ ತಜ್ಞ ಡಾ.ಶೆಲ್ವಪಿಳ್ಳೆ ಅಯ್ಯಂಗಾರ್ ಈ ರಂಗಚಾರ್ಲು ಪುರಭವನ (ಟೌನ್ ಹಾಲ್) ವನ್ನು ದಿವಾನ್ ರಂಗಚಾರ್ಲು ಅವರ ಸೇವೆಯ ಸವಿನೆನಪಿಗಾಗಿ 10ನೇ ಚಾಮರಾಜ ಒಡೆಯರ್ ಅವರು 1884ರ ಏ.01 ರಂದು ಕಟ್ಟಿಸಿದ್ದು. ಈ ಭವನ ವಿಶೇಷತೆ ಎಂದರೆ ಸಿಮೆಂಟ್ ಬಳಸದೆ ನಿರ್ಮಿಸಿರುವ ಕಟ್ಟಡವಾಗಿದೆ ಎಂದು ಮಾಹಿತಿ ನೀಡಿದರು.

ಸಾಮಾನ್ಯವಾಗಿ ಎಲ್ಲರೂ ಸಿಮೆಂಟ್ ಕಟ್ಟಡಗಳು ಹೆಚ್ಚು ಸಧೃಡವಾಗಿರುತ್ತದೆ ಎಂದು ನಂಬಿರುತ್ತಾರೆ. ಆದರೆ ಸಿಮೆಂಟ್ ಕಟ್ಟಡಗಳ ಆಯಸ್ಸು ಕೇವಲ 60 ರಿಂದ 70 ವರ್ಷಗಳು ಮಾತ್ರ. ಹೀಗಾಗಿ ಇಂತಹ ಕಟ್ಟಡಗಳನ್ನು ಮಾರ್ಟರ್ ಅನ್ನು ಬಳಸಿ ಕಟ್ಟಿದ್ದರಿಂದ ಇಂತಹ ಅನೇಕ ಕಟ್ಟಡಗಳು ಇಂದಿಗೂ ಕಾಣಸಿಗುತ್ತಿದೆ ಎಂದರು.

ಭಾರತ ಸಂವಿಧಾನದಲ್ಲೇ ಪಾರಂಪರಿಕ ಕಟ್ಟಡಗಳ ಸಂರಕ್ಷಿಸಬೇಕು ಎಂದು ತಿಳಿಸಿದ್ದಾರೆ. ಸರ್ಕಾರ ಒಂದೇ ಸಂರಕ್ಷಿಸಲು ಆಗುವುದಿಲ್ಲ. ಅದಕ್ಕೆ ಎಲ್ಲರ ಸಹಕಾರ ಅವಶ್ಯ. ಹೀಗಾಗಿ ಇಂತಹ ಕಟ್ಟಡಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು.

ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸಿದ್ದ ಮಹಾಜನ 1st ಗ್ರೇಡ್ ಕಾಲೇಜು, ಟೆರಿಷಿಯನ್ ಕಾಲೇಜ್,ಆಡಳಿತ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಸೇರಿದಂತೆ 180ಕ್ಕೂ ಹೆಚ್ಚು ನೊಂದಿಣಿಗೊಂಡಿದ್ದವರಿಗೆ ನಿವೃತ್ತ ಪ್ರೋಫೆಸರ್ ಡಾ.ಎನ್.ಎಸ್.ರಂಗರಾಜು ಅವರು ಕಟ್ಟಡಗಳ ಇತಿಹಾಸಗಳ ಬಗ್ಗೆ ಸುಂದರವಾಗಿ ವಿವರಿಸಿದರು.

ನಡಿಗೆಯು ರಂಗಚಾರ್ಲು ಪುರಭವನ (ಟೌನ್ ಹಾಲ್) ದಿಂದ ಪ್ರಾರಂಭವಾಗಿ ಸಿಲ್ವರ್ ಜೂಬಿಲಿ ಕ್ಲಾಕ್ ಟವರ್ (ದೊಡ್ಡಗಡಿಯಾರ), ಫ್ರಿಮೇಸನ್ಸ್ ಕ್ಲಬ್, 10ನೇ ಚಾಮರಾಜ ಒಡೆಯರ್ ವೃತ್ತ, ಅರಮನೆ, 4ನೇ ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕ ಗಡಿಯಾರ, ದೇವರಾಜ ಮಾರುಕಟ್ಟೆ, ಕೃಷ್ಣರಾಜ ಆಸ್ಪತ್ರೆ, ಮೈಸೂರು ಮೆಡಿಕಲ್ ಕಾಲೇಜು, ಸರ್ಕಾರಿ ಆರ್ಯುವೇದ ಕಾಲೇಜು ಹಾಗೂ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸಿಟಿಟ್ಯೂಟ್, ಕಾವೇರಿ ಎಂಪೋರಿಯಂ ಹಾಗೂ ಗಾಂಧಿ ವೃತ್ತವನ್ನು ಹಾದು ರಂಗಚಾರ್ಲು ಪುರಭವನದ ಹತ್ತಿರ ಮುಕ್ತಾಯಗೊಂಡಿತು.

ಮೈಸೂರು ಮಹಾನಗರ ಪಾಲಿಕೆಯ ಉಪ ಮೇಯರ್ ಡಾ.ಜಿ.ರೂಪ, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ. ದೇವರಾಜ, ಉಪ ನಿರ್ದೇಶಕಿ ಮಂಜುಳ ಸೇರಿದಂತೆ ಇತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!