ಹೊಸದಿಗಂತ ಡಿಜಿಟಲ್ ಡೆಸ್ಕ್:
ವಕ್ಫ್(ತಿದ್ದುಪಡಿ) ಮಸೂದೆ 2024ರ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ನವೆಂಬರ್ 7 ರಂದು ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಭೇಟಿ ನೀಡಿ, ರೈತರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮಂಗಳವಾರ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ವಕ್ಫ್ ವಿವಾದ ಜೋರಾಗಿದೆ. ಇದರ ಬೆನ್ನಲ್ಲೇ ಜಗದಾಂಬಿಕ ಪಾಲ್ ಅವರು ಹುಬ್ಬಳ್ಳಿ ಭೇಟಿ ನೀಡುತ್ತಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಪತ್ರ ಬರೆದಿದ್ದರು. ರೈತರ ಅಹವಾಲು ಆಲಿಸಲು, ರೈತರನ್ನು ವಕ್ಫ್ ನಿಯಮಗಳ ತಿದ್ದುಪಡಿಗೆ ಸಾಕ್ಷ್ಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು.
ವಕ್ಫ್ ಅತಿಕ್ರಮಣದಿಂದ ಸಂತ್ರಸ್ತರಾದ ರೈತರೊಂದಿಗೆ ಸಂವಾದ ನಡೆಸಲು ನವೆಂಬರ್ 7 ರಂದು ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಭೇಟಿ ನೀಡುವಂತೆ ನಾನು ಮಾಡಿದ್ದ ಮನವಿಗೆ ಜೆಪಿಸಿ ಅಧ್ಯಕ್ಷರು ಒಪ್ಪಿಗೆ ನೀಡಿದ್ದಾರೆ ಎಂದರು.
ಜೆಪಿಸಿ ಅಧ್ಯಕ್ಷರು ರೈತ ಸಂಘಟನೆಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಮಠಾಧೀಶರು ಮತ್ತು ಇತರರು ನೀಡಿದ ಮನವಿಗಳನ್ನು ಜೆಪಿಸಿ ಮುಂದೆ ಇಡಲಾಗುವುದು ಎಂದು ಜೆಪಿಸಿ ಸದಸ್ಯರಾದ ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ.
ರೈತರು ಸುಮಾರು ಒಂದು ಶತಮಾನದಿಂದ ತಮ್ಮ ಜಮೀನುಗಳನ್ನು ಸಾಗುವಳಿ ಮಾಡುತ್ತಿದ್ದಾರೆ. ಆದರೆ ಇತ್ತೀಚಿನ ತಿಂಗಳುಗಳಲ್ಲಿ, ಅವರಲ್ಲಿ ಹಲವರಿಗೆ ಯಾವುದೇ ದಾಖಲೆ ಅಥವಾ ವಿವರಣೆಯಿಲ್ಲದೆ ಅವರ ಭೂಮಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಲು ನೋಟಿಸ್ ನೀಡಲಾಗಿದೆ ಎಂದು ಬಿಜೆಪಿ ಸಂಸದ ದೂರಿದ್ದಾರೆ.
ವಕ್ಫ್ ಅತಿಕ್ರಮಣ ಮಾಡಿದ ಆಸ್ತಿಯ ಪ್ರಮಾಣವು ಗಣನೀಯವಾಗಿದೆ. ಸುಮಾರು 1,500 ಎಕರೆ ಆಸ್ತಿಯನ್ನು ಅವರ ಹಳ್ಳಿಯಲ್ಲಿಯೇ ವಕ್ಫ್ ಆಸ್ತಿ ಎಂದು ಗೊತ್ತುಪಡಿಸಲಾಗಿದೆ ಎಂದು ಪಾಲ್ಗೆ ಬರೆದ ಪತ್ರದಲ್ಲಿ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.