ವಕ್ಫ್ ಭೂ ವಿವಾದ: ಅಮಿತ್ ಶಾಗೆ ಪತ್ರ ಬರೆದ ವಿಪಕ್ಷ ನಾಯಕ ಆರ್.ಅಶೋಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಕ್ಫ್ ಭೂ ವಿವಾದ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಈ ನಡುವೆ ಕರ್ನಾಟಕದಲ್ಲಿ ವಕ್ಫ್ ಮಂಡಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಆಸ್ತಿ ನೋಂದಣಿ, ತಿದ್ದುಪಡಿಗಳನ್ನು ತಕ್ಷಣ ನಿಲ್ಲಿಸುವಂತೆ ರಾಜ್ಯ ಮುಖ್ಯಕಾರ್ಯದರ್ಶಿಗೆ ನಿರ್ದೇಶನ ನೀಡುವಂತೆ ವಿಪಕ್ಷ ನಾಯಕ ಆರ್.ಅಶೋಕ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಈ ಬಗ್ಗೆ ಅಮಿತ್ ಶಾ ಹಾಗೂ ವಕ್ಫ್ ತಿದ್ದುಪಡಿ ಮಸೂದೆ-2024ರ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರಿಗೂ ಪತ್ರ ಬರೆದಿದ್ದಾರೆ.

ರಾಜ್ಯ ಸರ್ಕಾರ ಹಾಗೂ ವಕ್ಫ್ ಮಂಡಳಿ ಕಂದಾಯ ದಾಖಲೆಗಳನ್ನು ತಿದ್ದುವ ಹಾಗೂ ರೈತರ ಜಮೀನು ಮಾಲೀಕತ್ವ ವರ್ಗಾಯಿಸಿಕೊಳ್ಳುವ ಯತ್ನ ನಡೆಸಿದೆ. ಈ ರೀತಿ ತರಾತುರಿಯಲ್ಲಿ ಜಮೀನುಗಳನ್ನು ವಕ್ಫ್ ಮಂಡಳಿ ನೊಂದಾಯಿಸಿಕೊಳ್ಳುತ್ತಿರುವ ಪರಿಣಾಮ ರೈತರು ವಂಶಪಾರಂಪರ್ಯವಾಗಿ ಬಂದ ಭೂಮಿ ಕಳೆದುಕೊಳ್ಳುತ್ತಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ 15,000 ಎಕರೆ ಜಮೀನು ವಶಪಡಿಸಿಕೊಳ್ಳಲು ವಕ್ಫ್ ಬೋರ್ಡ್ ನೋಟಿಸ್ ನೀಡಿದೆ. ಎಲ್ಲಾ ಜಿಲ್ಲೆಗಳಲ್ಲಿಯೂ ತಲಾ 10,000 ಎಕರೆ ಜಮೀನನ್ನು ವಕ್ಫ್ ನೋಂದಣಿ ಮಾಡಿಕೊಳ್ಳುವ ಯತ್ನ ಮಾಡಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ವಕ್ಫ್ ಮಂಡಳಿ ಹಿಂದು ಧಾರ್ಮಿಕ ಸಂಸ್ಥೆಗಳ ಜಮೀನು, ದೇವಸ್ಥಾನ, ಮಠ ಹಾಗೂ ಹಿಂದು ಸ್ಮಶಾನ ಕೂಡ ತನ್ನದೆಂದು ಉಲ್ಲೇಖಿಸಿರುವುದು ಆಘಾತಕರ ಸಂಗತಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣ ವಕ್ಫ್ ಆಸ್ತಿ ನೋಂದಣಿ, ತಿದ್ದುಪಡಿ ಕ್ರಮ ನಿಲ್ಲಿಸುವಂತೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!