ವಕ್ಫ್ ಆಸ್ತಿ ವಿವಾದಕ್ಕೆ ಅಧಿಕಾರಿಗಳ ಯಡವಟ್ಟು ಕಾರಣ: ಸಚಿವ ಭೋಸರಾಜು

ಹೊಸದಿಗಂತ ವರದಿ, ಮಡಿಕೇರಿ:

ಕೆಲವೆಡೆ ದಾಖಲಾತಿಗಳಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿರುವುದಕ್ಕೆ ಹಿಂದಿನ ಅಧಿಕಾರಗಳ ಯಡವಟ್ಟು ಕಾರಣ ಎಂದು ಆರೋಪಿಸಿರುವ ಸಚಿವ ಎನ್.ಎಸ್.ಭೋಸರಾಜು ಅವರು, ಅವೆಲ್ಲವನ್ನೂ ಸರಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ. ಆದರೆ ಬಿಜೆಪಿಯವರು ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಅಸಮಾಧಾನ ಹೊರಗೆಡವಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಯ ಹಲವು ರೈತರಿಗೆ ಸಂಬಂಧಿಸಿದ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿದೆ. ಇದು ಹಿಂದಿನ ಅಧಿಕಾರಿಗಳಿಂದ ಆಗಿರುವ ಯಡವಟ್ಟು. ಅದಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಕ್ಯಾಬಿನೆಟ್‌ನಲ್ಲಿಯೂ ಈ ವಿಚಾರ ಪ್ರಸ್ತಾಪ ಮಾಡಿ ತಕ್ಷಣವೇ ಸರಿಪಡಿಸುವಂತೆ ಆದೇಶ ನೀಡಿದ್ದಾರೆ. ಆದರೆ ರಾಜ್ಯದಲ್ಲಿ ಉಪಚುನಾವಣೆ ಇರುವುದರಿಂದ ಬಿಜೆಪಿ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಅವರು ಕಿಡಿ ಕಾರಿದರು.
ಶಕ್ತಿ ಯೋಜನೆ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಭೋಸರಾಜು ಅವರು, ರಾಜ್ಯ ಸರ್ಕಾರದ ಯೋಜನೆಗಳಿಗೆ ಬಜೆಟ್‌ನಲ್ಲಿ 52,000 ಕೋಟಿ ರೂ. ಮೀಸಲಿಟ್ಟಿದ್ದೇವೆ. ಎಲ್ಲಾ ಯೋಜನೆಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಅನುದಾನ ಬಿಡುಗಡೆಯಾಗುತ್ತಿದೆ. ಕಾಂಗ್ರೆಸ್‌ ಸರ್ಕಾರ ನುಡಿದಂತೆ ಐದು ವರ್ಷವೂ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ ಎಂದು ಸ್ಪಷ್ಟಪಡಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಗ್ಯಾರಂಟಿ ಪರಿಷ್ಕರಣೆ ವಿಚಾರಕ್ಕೆ ಆಕ್ಷೇಪ ಮಾಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭೋಸರಾಜು, ಮಾಧ್ಯಮಗಳಲ್ಲಿ ಈ ವಿಚಾರಗಳು ಯಾಕೆ ಬಂದಿದೆ ಎಂದು ಖರ್ಗೆ ಕೇಳಿದ್ದಾರೆ. ಗೊಂದಲ ಏಕೆ ಸೃಷ್ಟಿ ಮಾಡುತ್ತಿರಿ ಅಂತ ಹೇಳಿದ್ದಾರೆ ಅಷ್ಟೆ. ಇದರಿಂದ ಯಾವುದೇ ಗೊಂದಲ ಆಗಿಲ್ಲ. ಯೋಜನೆ ಪರಿಷ್ಕರಣೆಯ ಪ್ರಸ್ತಾಪವೂ ಇಲ್ಲ ಎಂದು ನುಡಿದರು.

ರಾಜ್ಯದಲ್ಲಿ ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸವಿದೆ. ನಮ್ಮ ಆಂತರಿಕ ಸಮೀಕ್ಷೆಯೂ ಇದನ್ನೇ ಹೇಳಿದೆ‌ ಎಂದು ಸಚಿವರು ತಿಳಿಸಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!