ಹೊಸದಿಗಂತ ವರದಿ ಹಾವೇರಿ:
ಜಿಲ್ಲೆಯ ಸವಣೂರ ತಾಲೂಕಿನ ಕಡಕೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದ್ದ ಆಸ್ತಿಗಳನ್ನು ವಕ್ಪ್ ಸಂಸ್ಥೆ ಹೆಸರಿನಲ್ಲಿ ಖಾತೆ ಸೇರಿಸಿದ್ದಕ್ಕೆ ವಿರೋಧಿಸಿ, ಉದ್ರಿಕ್ತರು ಮುಸ್ಲಿಂ ಮುಖಂಡರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರ ಬೆನ್ನಲ್ಲೆ ತ್ವೇಷಮಯ ವಾತಾವರಣದ ಹಿನ್ನೆಲೆಯಲ್ಲಿ ಒಟ್ಟು 32 ಜನರನ್ನು ವಶಕ್ಕೆ ಪಡೆದಿರುವುದಾಗಿ ಎಸ್ಪಿ ಅಂಶುಕುಮಾರ ತಿಳಿಸಿದ್ದಾರೆ.
ವಕ್ಬ್ ಸಚಿವ ಜಮೀರ್ ಅಹ್ಮದ್ ಕಳೆದ ಸೆಪ್ಟೆಂಬರ್ 3 ರಂದು ನಡೆದ ಸಭೆಯಲ್ಲಿ ನೀಡಿದ ಸೂಚನೆ ಹಿನ್ನೆಲೆ, ಸೆಪ್ಟೆಂಬರ್ 27 ರಂದೇ ಜಿ.ಪಂ ಸಿಇಒ ಅಕ್ಷಯ್ ಶ್ರೀಧರ್ ಅವರಿಂದ ಆದೇಶವಾಗಿದೆ. ವಕ್ಪ್ ಆಸ್ತಿಗೆ ಸೇರಿದ ಖಾತಾ ದಾಖಲೆಗಳನ್ನು ಆಧರಿಸಿ, ವಕ್ಪ್ ಆಸ್ತಿ ಪರಭಾರೆ ನಿಷೇಧಿಸಿದೆ ಎಂದು ಲಾಕ್ ಮಾಡಲು ಪಿಡಿಒಗಳಿಗೆ ಆದೇಶ ಮಾಡಲಾಗಿದೆ. ಸರ್ಕಾರದ ನಡೆಯಿಂದ ಆಕ್ರೋಶಗೊಂಡು ಗಲಾಟೆ ಆರಂಭವಾಗಿದೆ.
ಮನೆಯ ಖಾತಾಗಳಲ್ಲಿ ವಕ್ಪ್ ಆಸ್ತಿ ಅಂತ ದಾಖಲಿಸಿ ವಾಸವಿದ್ದ ಮನೆಗಳನ್ನು ಖಾಲಿ ಮಾಡಿಸಬಹುದು ಎಂಬ ಆತಂಕ ಹಿನ್ನಲೆ ಕಡಕೋಳ ಗ್ರಾಮದಲ್ಲಿ ಉದ್ರಿಕ್ತ ಗುಂಪಿನಿಂದ ಮುಸ್ಲಿಂ ಸಮುದಾಯದ ಮುಖಂಡರ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಮುಸ್ಲಿಂ ಮುಖಂಡ ಮಹಮದ್ ರಫಿ ಎಂಬುವರ ಮನೆ ಮೇಲೆ ಉದ್ರಿಕ್ತ ಗುಂಪಿನಿಂದ ದಾಳಿ, ಕಲ್ಲು ತೂರಾಟ ನಡೆಸಿ ಮನೆ ಮುಂದಿರೋ ಬೈಕ್ ಜಖಂಗೊಳಿಸಲಾಗಿದೆ.
ಘಟನೆ ಬೆನ್ನಲ್ಲೇ ಕಡಕೋಳ ಗ್ರಾಮಕ್ಕೆ ಬುಧವಾರ ರಾತ್ರೋ ರಾತ್ರಿ ದೌಡಾಯಿಸಿದ ಡಿಸಿ ವಿಜಯ ಮಹಾಂತೇಶ್, ಎಸ್ಪಿ ಅಂಶು ಕುಮಾರ ಸೂಕ್ತ ಬಂದೋಬಸ್ತ ನಡೆಸಿ, ಗ್ರಾಮಸ್ಥರನ್ನು ಕರೆಸಿ ಮನವೊಲಿಕೆ ಮಾಡಲು ಮುಂದಾದರು.
ಆದಾಗ್ಯೂ ಪರಿಸ್ಥಿತಿ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಇನ್ನು ಕಡಕೋಳ ಗಲಾಟೆಯಲ್ಲಿ ಗಾಯಗೊಂಡವರಿಗೆ ಸವಣೂರು ಸರ್ಕಾರಿ ಆಸ್ಪತ್ತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಗಂಭೀರವಾಗಿ ಗಾಯಗೊಂಡ ಹಿನ್ನಲೆ ಮಹಮದ್ ರಫಿ ಹತ್ತಿಮತ್ತೂರು(60) ಹುಬ್ಬಳ್ಳಿ ಕಿಮ್ಸ್ ಗೆ ರವಾನೆ ಮಾಡಲಾಗಿದೆ. ಉಳಿದ ನಾಲ್ವರು ಗಾಯಾಳುಗಳಾದ ರಿಯಾಜ್ ಅಹ್ಮದ್ ಅತ್ತಿಗೇರಿ (37) ಕತುನಬಿ ನದಾಫ್ (60) ಮೌಲಾಸಾಬ್ ನದಾಪ್ (70) ಮೆಹಬೂಬ್ ಸಾಬ್ ನದಾಪ್ (35) ಇವರಿಗೆ ಸವಣೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿದೆ.
ಕಡಕೋಳ ಗ್ರಾಮದಲ್ಲಿ ಪೊಲೀಸ್ ಮತ್ತು ಡಿಎಆರ್ ತಂಡ ನಿಯೋಜಿಸಿ ಬಿಸಿ ಬಂದೋಬಸ್ತ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.