ಹೊಸದಿಗಂತ ವರದಿ ಕುಂದಗೋಳ:
ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ಹೇಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಶುಕ್ರವಾರ ಧಾರವಾಡ ಜಿಲ್ಲೆಯ ಕುಂದಗೋಳದ ಪ್ರವಾಸ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಬಿಜೆಪಿ ಸೋಲಿಸಲು ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಿದೆ. ಇದಕ್ಕೆ ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಪಕ್ಷದ ಆಂತರಿಕ ಮೈತ್ರಿ ಕೈಗನ್ನಡಿಯಾಗಿದ್ದು, ಪರೋಕ್ಷವಾಗಿ ಭಯೋತ್ಪಾದನೆ ಪ್ರೋತ್ಸಾಹಿಸುತ್ತಿದೆ ಎಂದರು.
ಕಾಂಗ್ರೆಸ್ ನ ವಾರೆಂಟಿ ಮುಗಿದಿದ್ದು, ಈಗ ಜನರ ಮುಂದೆ ಗ್ಯಾರಂಟಿ ಭರವಸೆ ನೀಡುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಪ್ರಯತ್ನ ನಡೆಸಿದ್ದಾರೆ. ಮೂರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರು ಸಹ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬರುತ್ತಾರೆ. ರಾಜಸ್ಥಾನ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದರು. ಇಲ್ಲಿವರೆಗೂ ಒಂದು ರೂಪಾಯಿ ಮನ್ನಾ ಮಾಡಿಲ್ಲ ಎಂದು ಹರಿಹಾಯ್ದರು.
ರಾಜ್ಯದಲ್ಲಿ ನಾಲ್ಕು ಕಡೆಗಳಿಂದ ವಿಜಯ ಸಂಕಲ್ಪ ರಥಯಾತ್ರೆ ಅರಂಭಿಸಲಾಗಿದ್ದು, ಈಗಾಗಲೇ 140 ಯಾತ್ರೆ ಯಶಸ್ವಿಯಾಗಿದೆ. ಜನರಿಂದಲೂ ಸಹ ಅಭೂತಪೂರ್ವ ಬೆಂಬಲ ದೊರೆಕಿದೆ. ಈ ಬಾರಿ ಬಿಜೆಪಿ ಅತಿ ಹೆಚ್ಚು ಸ್ಥಾನಪಡೆದು ಅಧಿಕಾರಕ್ಕೆ ಬರುತ್ತದೆ ಎಂದರು.
ಯಾತ್ರೆಯುದ್ಧಕ್ಕೂ ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಿರುವ ಅಭಿವೃದ್ಧಿ ರಿಪೋರ್ಟ್ ಕಾಡ್೯, ಪಕ್ಷದ ಸಿದ್ಧಾಂತ ಹಾಗೂ ಬದ್ಧತೆ ಜನರಿಗೆ ಮನವರಿಕೆ ಮಾಡುವ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಕಳೆದ ಬಾರಿ ಬಿಜೆಪಿ ಬಹುಮತ ಸಿಕ್ಕಿಲ್ಲ, ಈ ಬಾರಿ ಬಹುಮತ ನೀಡಿ ಎಂದು ಜನರಿಗೆ ವಿನಂತಿಸಲಾಗಿದೆ ಎಂದು ಹೇಳಿದರು.
ಕುಕ್ಕರ್ ನಲ್ಲಿ ಬಾಂಬ್ ಇಡುವವರು ಮತ ಎಷ್ಟು ಬರುತ್ತದೆ ಎಂಬ ಯೋಚನೆಯಲ್ಲಿ ಇದ್ದಾರೆ. ರಾಜಕಾರಣಕ್ಕಾಗಿ ಒಡೆದಾಡುವ ನೀತಿ ಅನುಸರಿಸಲಾಗುತ್ತದೆ ಎಂದರು.
ನನ್ನ ಬೆಳವಣಿಗೆ ಸಹಿಸಲಾಗದವರು ತಳಬುಡವಿಲ್ಲದ ವಿಡಿಯೋ ಹಾಕುವ ಮೂಲಕ ಲಿಂಗಾಯತ ಬಗ್ಗೆ ಮಾತನಾಡಲಾಗಿದೆ ಎಂದು ಸೃಷ್ಟಿಸಲಾಗಿದೆ. ಈಗಾಗಲೇ ಸೈಬರ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಈ ರೀತಿ ಮಾಡಿದವರನ್ನು ನಾನು ಸುಮ್ಮನೆ ಬಿಡುವುದಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಯಾವತ್ತು ಜಾತಿ ಮಾಡಿದವನಲ್ಲ. ಹಿಂದೂತ್ವಕ್ಕಾಗಿ ಬಿಜೆಪಿಯಲ್ಲಿ ಇದ್ದವನು. ಲಿಂಗಾಯತ ಸಮುದಾಯ ನನ್ನ ಮನೆ ಮಗನ ಹಾಗೇ ಕಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಎಂ.ಆರ್. ಪಾಟೀಲ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಸಚಿವ ಸಿ.ಸಿ. ಪಾಟೀಲ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮುಖಂಡ ಎಸ್.ಐ.ಚಿಕ್ಕನಗೌಡ,ಲಿಂಗರಾಜ ಪಾಟೀಲ ಇದ್ದರು.